ಮಂಗಳೂರು, ಅ. 18 : ನಮ್ಮ ಕುಡ್ಲ ವಾಹಿನಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ 25ನೇ ವರ್ಷದ ಗೂಡುದೀಪ ಸ್ಪರ್ಧೆ ಅ.19, ಭಾನುವಾರ ಸಂಜೆ 6ರಿಂದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಪುರಸ್ಕಾರ, ಸನ್ಮಾನ ನಡೆಯಲಿದೆ ಎಂದು ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರಾ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪ್ರತಿಯೊಂದು ವಿಭಾಗದಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ಚಿನ್ನದ ಪದಕ, ತೃತೀಯ ಸ್ಥಾನ ಪಡೆದ ಮೂವರು ವಿಜೇತರಿಗೆ ಬೆಳ್ಳಿಯ ಪದಕ ಹಾಗೂ 50 ಪ್ರೋತ್ಸಾಹಕ ಬಹುಮಾನ ಹಾಗೂ ವಿಶೇಷ ಪ್ರೋತ್ಸಾಹಕ ಬಹುಮಾನಗಳಿವೆ. ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ಧಿಗೂ ನೆನಪಿನ ಕಾಣಿಕೆಯ ಜೊತೆಗೆ ಸಿಹಿತಿಂಡಿಯ ಪೊಟ್ಟಣ ಹಾಗೂ ಶ್ರೀಕ್ಷೇತ್ರದ ಪ್ರಸಾದ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ರಂಗಭೂಮಿ ಕಲಾವಿದರಾಗಿರುವ ಲಕ್ಷ್ಮಣ ಕುಮಾರ್ ಮಲ್ಲೂರು ಇವರಿಗೆ ನಮ್ಮಕುಡ್ಲ ಪ್ರಶಸ್ತಿ, ಸಮಾಜ ಸೇವಕ, ಅಸಾಮಾನ್ಯ ಸಾಧಕರಾದ ಉಡುಪಿಯ ಡಾ. ಜಿ. ಶಂಕರ್‌ರವರಿಗೆ ನಮ್ಮತುಳುವೆರ್ ಪ್ರಶಸ್ತಿ, ಸಮಾಜ ಸೇವೆ ಮಾಡುತ್ತಿರುವ ಯುವವಾಹಿನಿ ಸಂಸ್ಥೆಗೆ ಬಿ. ಪಿ. ಕರ್ಕೇರ ಸೇವಾ ಪ್ರಶಸ್ತಿ, ಮಂಗಳೂರಿನಲ್ಲಿ ಸೇವಾ ಭಾವ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ ಸಾಧಕಿ ಗೀತಾ ಶೆಟ್ಟಿ ಇವರಿಗೆ ಲಕ್ಷ್ಮೀ ಬಿ. ಪಿ. ಕರ್ಕೇರ ಪ್ರಶಸ್ತಿ ನಮ್ಮ ಕುಡ್ಲ ಹಿರಿಯ ಕ್ಯಾಮರಮೆನ್ ದಿವಾಕರ ಬೈಕಂಪಾಡಿ ಅವರ ಪುತ್ರ ಶೋಧಿತ್ ಅಮೀನ್ ಬೈಕಂಪಾಡಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.
ಸಹಕಾರಿ ರಂಗದಲ್ಲಿ ಸಾಧನೆ ಮಾಡಿದ, ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಕರ್ನಾಟಕ ಸರಕಾರದ ಮಾಜಿ ಸಚಿವ, ಉದ್ಯಮಿ ಕೃಷ್ಣ ಜೆ. ಪಾಲೆಮಾರ್, ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಗೌರವ ಸನ್ಮಾನ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಮ್ಮ ಕುಡ್ಲ ವಾಹಿನಿ ನಿರ್ದೇಶಕರಾದ ಹರೀಶ್ ಬಿ. ಕರ್ಕೇರಾ, ಸುರೇಶ್ ಬಿ. ಕರ್ಕೇರಾ, ಮೋಹನ್ ಬಿ. ಕರ್ಕೇರಾ, ಸಂತೋಷ್ ಬಿ. ಕರ್ಕೇರಾ, ಪ್ರಮುಖರಾದ ದಯಾನಂದ ಕಟೀಲ್, ಸುದರ್ಶನ್ ಕೋಟ್ಯಾನ್, ಜಯಂತ್ ಉಳ್ಳಾಲ್ ಉಪಸ್ಥಿತರ್ದಿದ್ದರು.