ಮಂಗಳೂರು, ನ. 15 : ತಯಾರಿಸಲ್ಪಟ್ಟ ನಂದಿನಿ ಸೀಡ್ಸ್ ಡಿಲೈಟ್ ಮತ್ತು ಗುವಾ ಚಿಲ್ಲಿ ಲಸ್ಸಿ ಉತ್ಪನ್ನಗಳು ನ. 16ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಜರಗಲಿರುವ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಣೆ ಸಂದರ್ಭ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದಾಗಿ ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಕೊಡವೂರು ಅವರು ಕುಲಶೇಖರದ ನಂದಿನಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಮಾಹಿತಿ ನೀಡಿದ ಅವರು, ನಂದಿನಿ ಹೊಸ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಹಾಲು ಒಕ್ಕೂಟವು ನ.17ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ ನಂದಿನಿ ಪಾರ್ಲರ್, ಪ್ರಾಂಚೈಸಿ ಮತ್ತು ಡೀಲರ್ ಕೇಂದ್ರಗಳಲ್ಲಿ ಮೊದಲು ಬಂದ ಗ್ರಾಹಕರಿಗೆ ದಾಸ್ತಾನು ಮುಗಿಯುವವರೆಗೆ ಉಚಿತವಾಗಿ ನಂದಿನಿ ಸೀಡ್ಸ್ ಡಿಲೈಟ್ ಮತ್ತು ಗುವಾ ಚಿಲ್ಲಿ ಲಸ್ಸಿ ನೀಡಲಾಗುತ್ತದೆ. ಅವಿಭಜಿತ ಜಿಲ್ಲೆಯ ನಂದಿನಿ ಗ್ರಾಹಕರು ನೂತನ ಉತ್ಪನ್ನಗಳನ್ನು ಖರೀದಿಸಿ ಹಾಲು ಉತ್ಪಾಕರನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದರು.
ಒಕ್ಕೂಟದಿಂದ ಆರೋಗ್ಯದಾಯಕವಾಗಿರುವ ನಂದಿನಿ ಸೀಡ್ಸ್ ಡಿಲೈಟ್ ಉತ್ಪನ್ನವನ್ನು ಅತ್ಯುತ್ತಮ ಗುಣಮಟ್ಟದ ಕಲ್ಲಂಗಡಿ ಬೀಜ, ಸಿಹಿ ಕುಂಬಳಕಾಯಿ ಬೀಜ, ಅಗಸೆ ಬೀಜ, ಬಾದಾಮಿ, ಸಕ್ಕರೆ, ನಂದಿನಿ ಹಾಲು, ನಂದಿನಿ ತುಪ್ಪ ನಂದಿನಿ ಕೋವಾ ಬಳಸಿ ಆಧುನಿಕ ತಾಂತ್ರಿಕತೆಯಿಂದ ತಯಾರಿಸಲಾಗಿದೆ. ಇವುಗಳಲ್ಲಿ ಪ್ರೊಟೀನ್, ಫೈಬರ್, ವಿಟಮಿನ್ಸ್, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿದೆ ಎಂದರು.
ನಂದಿನಿ ಗುವಾ ಚಿಲ್ಲಿ ಲಸ್ಸಿ ಉತ್ಪನ್ನವನ್ನು ಪೇರಳೆ ಹಣ್ಣಿನ ತಿರುಳು, ಉಪ್ಪು, ಸಕ್ಕರೆ, ಮೆಣಸಿನ ಹುಡಿ, ನಿಂಬೆ ಹಣ್ಣಿನ ರಸ ಮತ್ತು ನಂದಿನಿ ಮೊಸರನ್ನು ಬಳಸಿ ಆಧುನಿಕ ತಾಂತ್ರಿಕತೆಯಿಂದ ತಯಾರಿಸಲಾಗಿದೆ. ಇದರಲ್ಲಿ ಕ್ಯಾಲ್ಸಿಯಮ್, ವಿಟಮಿನ್ ಸಿ, ಪೊಟ್ಯಾಶಿಯಮ್ ಮುಂತಾದ ಪೋಷಕಾಂಶಗಳಿವೆ ಎಂದು ಹೇಳಿದರು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಲಿನ ದರ ಕನಿಷ್ಠ ಎರಡು ರೂಪಾಯಿಯಾದರೂ ಏರಿಸುವಂತೆ ಮನವಿ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹಾಲಿನ ಉತ್ಪಾದನೆ ಹೆಚ್ಚಿದ್ದು, ಸುಮಾರು 1 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಚಂದ್ರಶೇಖರ್ ಮಾಡೂರು, ಸುಧಾಕರ ಶೆಟ್ಟಿ ಮಮತಾ ಶೆಟ್ಟಿ, ಕಾರ್ಕಳ, ನಂದರಾಮ್ ರೈ, ದೇವಿಪ್ರಸಾದ್ ಶೆಟ್ಟಿ, ಆಡಳಿತ ನಿರ್ದೇಶಕ ವಿವೇಕ್, ಡೈರಿ ವ್ಯವಸ್ಥಾಪಕ ಗುರುಪ್ರಸಾದ್, ರವಿರಾಜ್ ಉಡುಪ ಉಪಸ್ಥಿತರಿದ್ದರು.











