ಮಂಗಳೂರು,ನ.17 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು. ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳು, ಸೌಹಾರ್ದ ಸಹಕಾರ ಸಂಘಗಳು ಹಾಗೂ ಎಲ್ಲಾ ವಿಧದ ಸಹಕಾರ ಸಂಘಗಳು ಮತ್ತು ಸಹಕಾರ ಇಲಾಖೆಯ ಸಹಯೋಗದೊಂದಿಗೆ 72ನೇ ಅಖಿಲ ಭಾರತ ಸಹಕಾರ ಸಪ್ತಾಹವು ಭಾನುವಾರ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಇತರ ಅಥಿತಿಗಳೊಂದಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಬಳಿಕ ಮಾತಾಡಿದ ಅವರು ,ಸಹಕಾರರಂಗ ದೇಶದ ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡುವ ಮೂಲಕ ಗ್ರಾಮೀಣ ಜನರಿಗೆ ಶಕ್ತಿ ನೀಡಿದೆ. ದೇಶದ ಅಭಿವೃದ್ಧಿಗೆ ಸಹಕಾರರಂಗ ಅಪಾರ ಕೊಡುಗೆ ನೀಡುತ್ತಿದೆ ಎಂದರು.
ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸ್ವಾಗತಿಸಿ ಮಾತನಾಡುತ್ತಾ,, ಸಹಕಾರ ಬ್ಯಾಂಕ್ ಜಿಲ್ಲೆಯ ಜನರ ಆರ್ಥಿಕ ಅಗತ್ಯಗಳಿಗೆ ಸ್ಪಂದಿಸುತ್ತಾ ಬಂದಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಿಸಾಟಿಯಾಗಿ ರೈತರ ಆರ್ಥಿಕ ಅಗತ್ಯಗಳಿಗೆ ಶಿಕ್ಷಣ, ಮದುವೆ ಸೇರಿದಂತೆ ತುರ್ತು ಅಗತ್ಯಗಳಿಗೆ ಸ್ಪಂದಿಸಿದೆ. ಗ್ರಾಮೀಣ ಭಾಗದ ಜನರ, ಮಹಿಳೆಯರ ಸ್ವಾವಲಂಬನೆಗೆ ದೇಶಾದ್ಯಂತ ವ್ಯಾಪಿಸಿರುವ ಸಹಕಾರ ಸಂಸ್ಥೆಗಳು ಕೊಡುಗೆ ನೀಡಿದೆ. ಕರಾವಳಿಯಲ್ಲಿ ಮಹಿಳೆಯರ ಸ್ವಾಭಿಮಾನದ ಬದುಕಿಗೆ ಸಹಕಾರ ಕ್ಷೇತ್ರ ಮಹತ್ವದ ಕೊಡುಗೆ ನೀಡಿದೆ ಎಂದು ಹೇಳಿದರು.
ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಮಾತಾಡಿ, ಸಹಕಾರ ಸಂಘಗಳು ಪ್ರೀತಿಯಿಂದ ವ್ಯವಹಾರ ನಡೆಸುತ್ತವೆ. ವಾಣಿಜ್ಯ ಬ್ಯಾಂಕ್ ಗಳು ಸಾಲ ಕೊಡದೆ ಇದ್ದಾಗ ವಾಣಿಜ್ಯ, ಕೃಷಿ, ಶಿಕ್ಷಣ, ವಸತಿ ಗೆ ನೆರವಾಗಿದ್ದು ಇದೇ ಸಹಕಾರಿ ಬ್ಯಾಂಕ್ ಗಳು. ಸಹಕಾರ ಸಂಘಗಳ ಜೊತೆಗೆ ನಮ್ಮ ಸರಕಾರ ಬೆನ್ನಿಗೆ ಬೆನ್ನು ಕೊಟ್ಟು ನಿಂತಿದೆ ಎಂದರು.
ಇದೇ ಸಂದರ್ಭದಲ್ಲಿ ಮೂರು ಸಹಕಾರ ಸಂಸ್ಥೆಗಳಿಗೆ “ಸಹಕಾರ ಮಾಣಿಕ್ಯ ಪ್ರಶಸ್ತಿ”ಯನ್ನು ನೀಡಲಾಯಿತು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಲಾ ಒಂದು ಉತ್ತಮ ಕೃಷಿಪತ್ತಿನ ಸಹಕಾರಿ ಸಂಘಗಳನ್ನು ಹಾಗೂ ಒಂದು ಪತ್ತಿನ ಸಹಕಾರಿ ಸಂಘವನ್ನು 2025ನೇ ಸಾಲಿನ “ಸಹಕಾರ ಮಾಣಿಕ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯ ಜೊತೆಗೆ 5 ಗ್ರಾಂ ಚಿನ್ನದ ಪದಕ. 10.000 ರೂ. ನಗದು ಹಾಗೂ ಪಾರಿತೋಷಕವನ್ನು ನೀಡಲಾಯಿತು.. ಸಾಮಾನ್ಯ ವಿಭಾಗದಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ ಉಭಯ ಜಿಲ್ಲೆಗಳಲ್ಲಿ ಒಂದರಂತೆ ಹಾಗೂ ಹೈನುಗಾರಿಕೆ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಮೀನುಗಾರಿಕಾ ಸಹಕಾರಿ ಸಂಘ, ಸೌಹಾರ್ಧ ಸಹಕಾರಿ ಸಂಘ ಹಾಗೂ ಮಹಿಳಾ ಸಹಕಾರಿ ಸಂಘಕ್ಕೆ ಉಭಯ ಜಿಲ್ಲೆಗಳಿಂದ 1 ಹಾಗೂ ವಜ್ರ ಮಹೋತ್ಸವ ಮತ್ತು ಸುವರ್ಣ ಮಹೋತ್ಸವ ಪೂರೈಸಿದ ಸಂಘಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿ ಸೋಜ, ಕಿಶೋರ್ ಕುಮಾರ್ ಬೊಟ್ಯಾಡಿ,ಶಾಸಕ ಯಶ್ ಪಾಲ್ ಎ.ಸುವರ್ಣ, ನಬಾರ್ಡ್ ಮುಖ್ಯ ಪ್ರಬಂಧಕ ಡಾ.ಸುರೇಂದ್ರ ಬಾಬು, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಎಸ್ ಸಿಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕ ರಾದ ಐಕಳ ದೇವಿ ಪ್ರಸಾದ್ ಶೆಟ್ಟಿ, ಜಯರಾಜ ರೈ, ಮೋನಪ್ಪ ಶೆಟ್ಟಿ ಎಕ್ಕಾರ್, ಭಾಸ್ಕರ ಎಸ್ ಕೋಟ್ಯಾನ್, ಟಿ.ಜಿ.ರಾಜರಾಮಭಟ್ ಸದಾಶಿವ ಉಳ್ಳಾಲ್, ಶಶಿ ಕುಮಾರ್ ರೈ ಬಾಲ್ಯೂಟ್ಟು, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ರಾಜ್ಯ ಸಹಕಾರ ಮಹಾ ಮಂಡಳದ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್.ನವೀನ್, ಕರ್ನಾಟಕ ಸಹಕಾರ ಸಂಘಗಳ ರಾಜ್ಯ ನಿಬಂಧಕ ಟಿ.ಎಚ್.ಎಂ.ಕುಮಾರ್,ಸ್ಕಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಸಹಕಾರಿ ಇಲಾಖೆಯ ಉಪ ರಿಜಿಸ್ಟ್ರಾರ್ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.











