ಮಂಗಳೂರು : ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆಯಾದ ಮಾಂಡ್ ಸೊಭಾಣ್ ತನ್ನ ಸಾಹಿತ್ಯದ ಸಹ ಸಂಸ್ಥೆ ಅಕಾಡೆಮಿ ಮಿಟಾಕಣ್ ಮೂಲಕ ಸಾಹಿತ್ಯದ ಬಗ್ಗೆ ಒಲವು ಮೂಡಿಸಲು ಪ್ರೌಢಶಾಲಾವಿದ್ಯಾರ್ಥಿಗಳಿಗಾಗಿ ಒಂದು ದಿನದ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದೆ. ಡಿಸೆಂಬರ್ 07 ರಂದು ಭಾನುವಾರ ಬೆಳಿಗ್ಗೆ 8.45 ರಿಂದ ಸಂಜೆ 4.00 ಗಂಟೆ ತನಕ ಮಂಗಳೂರಿನ ಶಕ್ತಿನಗರ ದಲ್ಲಿರುವ ಕಲಾಂಗಣ ಮೈದಾನದಲ್ಲಿ ಈ ಸಮ್ಮೇಳನ ನಡೆಯಲಿದೆ ಎಂದು ಮಾಂಡ್ ಸೊಭಾಣ್ ನ ಅಧ್ಯಕ್ಷರಾದ ಲುವಿಸ್ ಜೆ.ಪಿಂಟೋ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಢಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಢಿಯಲ್ಲಿ ಮಾತಾಡಿದ ಅವರು,ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೊಕಿಂ ಸ್ಟ್ಯಾನಿ ಆಲ್ವಾರಿಸ್ ಸಮ್ಮೇಳನದ ಮೆರವಣಿಗೆಯನ್ನು ಉದ್ಘಾಟಿಸುವರು. ಸಮ್ಮೇಳನದ ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಹಿತಿ ವಂ. ಪ್ರಶಾಂತ್ ಮಾಡ್ತಾ ವಹಿಸಲಿರುವರು. 9 ನೇ ತರಗತಿಯ ವಿದ್ಯಾರ್ಥಿನಿ ಸಂಜನಾ ರಿವಾ ಮತಾಯಸ್ ಆಶಯ ಭಾಷಣವನ್ನು ಮಾಡಲಿರುವರು. ‘ಮಕ್ಕಳ ಸಾಹಿತ್ಯದ ಭವಿಷ್ಯ’ ಎಂಬ ವಿಷಯದ ಮೇಲೆ ವಿಚಾರಗೋಷ್ಠಿ ನಡೆಯಲಿದೆ
ಸಾಹಿತ್ಯದಲ್ಲಿ ಪ್ರಸಿದ್ಧಿ ಪಡೆದ ಶಿಕ್ಷಕತ್ರಯರಾದ ಆಲ್ವಿನ್ ದಾಂತಿ, ಪೆರ್ನಾಲ್, (ಅಧ್ಯಕ್ಷತೆ), ಫೆಲ್ಸಿ ಲೋಬೊ ದೇರೆಬೈಲ್ (ಅಜ್ಜಿಕತೆಗಳು ಹಾಗೂ ಆಧುನಿಕ ಮಕ್ಕಳು: ಸಂಬಂಧ ರೂಪಿಸುವ ಬಗೆ) ಮತ್ತು ವೆಂಕಟೇಶ್ ನಾಯಕ್ (ಭವಿಷ್ಯದಲ್ಲಿ ಮಕ್ಕಳ ಸಾಹಿತ್ಯದ ಆಯಾಮಗಳು) ಪ್ರಬಂಧ ಮಂಡಿಸುವರು. ಕವಿ ಆಂಡ್ರ್ಯೂ ಎಲ್ ಡಿಕುನ್ಯಾ ರಿಂದ ‘ಕವಿತೆ: ರಚನೆ ಮತ್ತು ಪ್ರಸ್ತುತಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನಡೆಯಲಿದೆ ಎಂದು ತಿಳಿಸಿದರು.
ಮಕ್ಕಳ ಕವಿಗೋಷ್ಟಿ, ಕಾರ್ಯಕ್ರಮ ನಿರೂಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿಯನ್ನು ಮಕ್ಕಳೇ ನಡೆಸುವರು.ಅವರಿಗಾಗಿ ರಸ ಪ್ರಶ್ನೆ ಕೂಡಾ ಆಯೋಜಿಸಲಾಗಿದೆ. ರಂಗು ರಂಗಿನ ಮೆರವಣಿಗೆ. ರುಚಿಕರ ಮತ್ತು ಆಕರ್ಷಕ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾರೋಪದಲ್ಲಿ ಪ್ರಮಾಣ ಪತ್ರ ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಿಟಾಕಣ್ ಮೂಲಕ ನಡೆದ ಅನುವಾದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಹಾಗೂ ಹಿರಿಯರು ವಿವಿಧ ಭಾಷೆಗಳಿಂದ ಕೊಂಕಣಿಗೆ ಅನುವಾದಿಸಿದ ಮಕ್ಕಳ ಕಥಾ ಸಂಗ್ರಹ ‘ಮೊ಼ಂವಾ-ಪೊಳಿ (ಜೇನು ಗೂಡು), ಎರಿಕ್ ಒಝೇರಿಯೊ ಅಮೃತೋತ್ಸವ ಸಂಶೋಧನಾ ಅನುದಾನದಲ್ಲಿ ಪ್ರಿಥುಮಾ ಮೊಂತೇರೊ ರಚಿಸಿದ ಸಂಶೋಧನಾ ಕೃತಿ ‘Konkani Christian Folk Culture’ (ಕೊಂಕಣಿ ಕ್ರೈಸ್ತರ ಜನಪದ ಸಂಸ್ಕೃತಿ) ಇವೆರಡು ಪುಸ್ತಕಗಳು ಮುದ್ರಣ ಮತ್ತು ಇ-ಬುಕ್ ರೂಪದಲ್ಲಿ ಹಾಗೂ ಕೇರನ್ ಮಾಡ್ತಾ ಸಂಪಾದಕತ್ವದಲ್ಲಿ ವ಼ಡ್ಲಿಷ್ಟಿಮಾಂಯೊ ಕಾಣಿಯೊ’ (ಅಜ್ಜಿ ಕತೆಗಳು – ಸಿಲ್ವೆಸ್ಟರ್ ಡಿಸೋಜ, ಮೈಸೂರು) ಇ- ಬುಕ್ ರೂಪದಲ್ಲಿ ಲೋಕಾರ್ಪಣೆಗೊಳ್ಳಲಿವೆ ಎಂದರು.
ಭಾಗವಹಿಸುವ ಮಕ್ಕಳು ವೈಯಕ್ತಿಕವಾಗಿ ಅಥವಾ ಶಾಲೆಗಳ ಮೂಲಕ ನವೆಂಬರ್ 29 ರೊಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮತ್ತು ಮಕ್ಕಳ ಹೆಸರು ನೋಂದಾಯಿಸಲು 8105 22 6626. ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಪ್ರೌಢಶಾಲಾ ಕೊಂಕಣಿ ವಿದ್ಯಾರ್ಥಿಗಳು ಭಾಗವಹಿಸುವಂತೆ ತಮ್ಮ ಮಾಧ್ಯಮದ ಮುಖಾಂತರ ಜನರಿಗೆ ಮಾಹಿತಿ ನೀಡಲು ಕೋರುತ್ತೇವೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಟಿಯಲ್ಲಿವಿಯೊನಾ ಜಾನಿಸ್ ಪಿಂಟೊ (ವಿದ್ಯಾರ್ಥಿನಿ) ರೊನಿ ಕ್ರಾಸ್ತಾ (ಸಂಚಾಲಕರು, ಮಿಟಾಕಣ್) ನವೀನ್ ಲೋಬೊ (ಉಪಾಧ್ಯಕ್ಷರು, ಮಾಂಡ್ ಸೊಭಾಣ್) ಅರುಣ್ ರಾಜ್ ರೊಡ್ರಿಗಸ್ (ಸದಸ್ಯರು, ಮಿಟಾಕಣ್) ಉಪಸ್ಥಿತರಿದ್ದರು.











