ಕಾಪು, ನ. 23 : ಮಂಗಳೂರಿನಿಂದ ಉಡುಪಿಗೆ ಹೋಗುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ವಾಹನದಿಂದ ಬಿದ್ದು ಮೃತಪಟ್ಟ ಘಟನೆ ಉಚ್ಚಿಲದಲ್ಲಿ ನಡೆದಿದೆ.
ಮೃತರನ್ನು ಕಾಪು ಪಡುಗ್ರಾಮದ ನಿವಾಸಿ ಸಕೇಂದ್ರ ಪೂಜಾರಿ (52) ಎಂದು ಗುರುತಿಸಲಾಗಿದೆ.
ಬಸ್ ಉಚ್ಚಿಲ ತಲುಪಿದಾಗ, ಸಕೇಂದ್ರ ಪೂಜಾರಿ ಅವರು ಮುಂಭಾಗದ ಬಾಗಿಲಿನ ಬಳಿ ಇಳಿದುಕೊಳ್ಳಲು ಸಿದ್ಧವಾಗಿದ್ದ ವೇಳೆ, ಚಾಲಕನು ಎದುರು ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ವಾಹನವನ್ನು ಹಿಂದಿಕ್ಕಲು ನಿರ್ಲಕ್ಷ್ಯದಿಂದ ವಾಹನವನ್ನು ಬಲಕ್ಕೆ ತಿರುಗಿಸಿದ್ದಾರೆ. ಇದರಿಂದಾಗಿ ಸಕೇಂದ್ರ ಬಾಗಿಲಿನ ಮೂಲಕ ಹೊರಗೆ ಎಸೆಯಲ್ಪಟ್ಟು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡು ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.
ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆ ವಿರುದ್ಧ ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.











