ಮಂಗಳೂರು, ನ. 27 : ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಸಾಕ್ಷಿ ದೂರುದಾರ,ಬಳಿಕ ಆರೋಪಿಯಾಗಿ ಬಂಧನಕ್ಕೆ ಒಳಗಾದ ಚಿನ್ನಯ್ಯನಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ. ಈ ಪ್ರಕರಣದಲ್ಲಿ ನ್ಯಾಯಾಲಯ 1 ಲಕ್ಷ ರೂ. ವೈಯಕ್ತಿಕ ಬಾಂಡ್ ಮತ್ತು 12 ಷರತ್ತುಗಳನ್ನು ವಿಧಿಸಿದೆ.
ಎಸ್‌ಐಟಿ ಸಲ್ಲಿಸಿದ ಮಧ್ಯಂತರ ಆರೋಪಪಟ್ಟಿಯ ನಂತರ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಚಿನ್ನಯ್ಯ ಪರ ವಕೀಲರು ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಜಾಮೀನು ಮಂಜೂರು ಮಾಡುವ ವೇಳೆ, ನ್ಯಾಯಾಲಯವು ಆರೋಪಿ ಪೂರ್ವಾನುಮತಿ ಇಲ್ಲದೆ ಜಿಲ್ಲೆ ಅಥವಾ ನ್ಯಾಯಾಲಯದ ವ್ಯಾಪ್ತಿಯನ್ನು ಬಿಟ್ಟು ಹೋಗುವಂತಿಲ್ಲ ಎಂದು ಸೂಚಿಸಿತು. ಹಾಗೆನೇ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ಅಥವಾ ಸಂದರ್ಶನ ನೀಡಲು ನಿರ್ಬಂಧಿತರಾಗಿದ್ದಾರೆ.











