ಮಂಗಳೂರು,ಜ.03 : ಉರ್ವ,ಹೊಗೆಬೈಲು ಬೈಕಾಡಿ ಪ್ರತಿಷ್ಠಾನ (ರಿ.) ವತಿಯಿಂದ ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 5 ರಂದು ಸೋಮವಾರ ಸಂಜೆ 4 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಭರತ್ ರಾಜ್ ಬೈಕಾಡಿ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ಬೈಕಾಡಿ ಜನಾರ್ದನ ಆಚಾರ್ ಅವರ ಧೈಯೋದ್ದೇಶಗಳನ್ನು ಮುಂದುವರಿಸಿಕೊಂಡು ಹೋಗುವ ಮತ್ತು ಶಿಕ್ಷಣ, ಕಲೆ, ಸಾಹಿತ್ಯ, ಸಮಾಜಸೇವೆ ಹಾಗೂ ಲಲಿತ ಕಲೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 5 ಜನವರಿ 2021ರಲ್ಲಿ ಬೈಕಾಡಿ ಪ್ರತಿಷ್ಠಾನವನ್ನು ಹುಟ್ಟು ಹಾಕಲಾಯಿತು. ಪ್ರತಿ ವರ್ಷದಂತೆ ಬೈಕಾಡಿಯವರ ಹುಟ್ಟುಹಬ್ಬದಂದು “ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ”ಯನ್ನು ವಿವಿಧ ಕ್ಷೇತ್ರಗಳಲ್ಲಿ ಕೃಷಿಗೈದ ಪ್ರತಿಭಾವಂತರಿಗೆ ಬೈಕಾಡಿ ಪ್ರತಿಷ್ಠಾನವು ನೀಡುತ್ತಾ ಬಂದಿದೆ. ಇದೇ ಜನವರಿ 5, 2026ರಂದು ಬೈಕಾಡಿಯವರ 75ನೇ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ‘ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ”ಯನ್ನು ಈ ಬಾರಿ ಹಿರಿಯ ಜನಪದ ಕಲಾವಿದ ರಮೇಶ್ ಕಲ್ಮಾಡಿಯವರಿಗೆ ನೀಡಿ ಗೌರವಿಸಲಾಗುವುದು ಅದೇ ರೀತಿ ಹಿರಿಯ ಭರತನಾಟ್ಯ ಗುರುಗಳಾದ ಮೋಹನ್ ಕುಮಾರ್ ಉಳ್ಳಾಲ್ ಅವರು ನೃತ್ಯ ಕ್ಷೇತ್ರದಲ್ಲಿ ಮಾಡಿದ ಅಪೂರ್ವ ಸೇವೆಗಾಗಿ ‘ಜೀವಮಾನ ಸಾಧನಾ ಪುರಸ್ಕಾರ’ ಮತ್ತು ಶಿಕ್ಷಕ, ಪಕ್ಷಿ ವೀಕ್ಷಕ ಮತ್ತು ಕಲಾವಿದರಾದ ಅರವಿಂದ ಕುಡ್ಲ ಇವರಿಗೆ “ಯುವ ಪುರಸ್ಕಾರ’ ನೀಡಿ ಗೌರವಿಸಲಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸುನಿಲ್ ಕುಮಾರ್ ವಿ. ಕಾರ್ಕಳ, ಕ್ಯಾ. ಗಣೇಶ್ ಕಾರ್ಣಿಕ್, ಡಾ. ರಾಮಕೃಷ್ಣ ಆಚಾರ್,ಡಾ.ಕೆ ಚಿನ್ನಪ್ಪ ಗೌಡ,ಮತ್ತು ಲ /ಸುಧಾಕರ ಆಚಾರ್ಯ ಅಭ್ಯಾಗತರಾಗಿ ಉಪಸ್ಥಿತರಿ ಲಿರುವರು. ಸಭಾ ಕಾರ್ಯಕ್ರಮದ ಬಳಿಕ ಮಂಡ್ಯ ರಮೇಶ್ ತಂಡ “ನಟನ ರಂಗ ಶಾಲೆ” ಮೈಸೂರು ಇಲ್ಲಿಯ ಕಲಾವಿದರಿಂದ “ಭಾಸ ಪಂಚಕ” (ಭಾಸ ಮಹಾಕವಿಯ 5 ನಾಟಕಗಳ ಸಂಕಲಿತ ರೂಪ) ಎಂಬ ಕನ್ನಡ ನಾಟಕದ ಪ್ರಸ್ತುತಿ ಇದೆ. ಉಚಿತ ಪ್ರವೇಶವಿದೆ. ನೃತ್ಯ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ನೃತ್ಯ ಗುರುಗಳ ಭಾವಚಿತ್ರ ಮತ್ತು ವಿವರವನ್ನೊಳಗೊಂಡ ಕ್ಯಾಲೆಂಡರ್ ಇದೇ ವೇದಿಕೆಯಲ್ಲಿ ಡಾ. ಎಂ. ಮೋಹನ ಆಳ್ವ ಇವರ ಅಮೃತಹಸ್ತದಿಂದ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರತ್ನಾವತಿ ಜೆ. ಬೈಕಾಡಿ ಅಧ್ಯಕ್ಷರು, ಬೈಕಾಡಿ ಪ್ರತಿಷ್ಠಾನ,ಮಂಗಳೂರು ರೇಖಾ ಬೈಕಾಡಿ,ಮಾಧುರಿ ಶ್ರೀರಾಮ್ ಉಪಸ್ಥಿತರಿದ್ದರು.











