ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ಜಾಗತಿಕ ಬಿಲ್ಲವರ ಕ್ರೀಡೋತ್ಸವ 2026 ಜನವರಿ 18ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಸಮುದಾಯವನ್ನು ಸಂಘಟಿಸುವ ಉದ್ದೇಶದೊಂದಿಗೆ ಈ ಜಾಗತಿಕ ಕ್ರೀಡೋತ್ಸವವನ್ನು ಆಯೋಜಿಸಲಾಗಿದೆ.ಅಂದು ಬೆಳಿಗ್ಗೆ 8 ಘಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ವಿಶ್ವಕಪ್ ಮಹಿಳಾ ಕಬ್ಬಡ್ಡಿಯಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಆಟಗಾರ್ತಿ ಕು.ಧನಲಕ್ಷ್ಮೀ ಪೂಜಾರಿಯವರ ನೇತೃತ್ವದಲ್ಲಿ ಕ್ರೀಡಾಕ್ಷೇತ್ರದಲ್ಲಿ ಅದ್ಭುತ ಸಾಧನೆಗೈದ ಆಟಗಾರರ ಜತೆಗೂಡುವಿಕೆಯಲ್ಲಿ ಕ್ರೀಡಾ ಜ್ಯೋತಿ ಮೆರವಣಿಗೆಯು ನಾರಾಯಣ ಗುರು ವೃತ್ತವಾಗಿ, ಲಾಲ್ ಭಾಗ್, ಕೆ.ಎಸ್.ರಾವ್ ಮಾರ್ಗವಾಗಿ ನೆಹರು ಮೈದಾನಕ್ಕೆ ತಲುಪಲಿದೆ. 9 ಘಂಟೆಗೆ ದಾಮೋದರ ಆರ್.ಸುವರ್ಣ ವೇದಿಕೆಯಲ್ಲಿ ಸಾಗರ್ ಗ್ರೂಪ್ ಆಫ್ ಹೊಟೇಲಿನ ಛೇರ್ ಮ್ಯಾನ್ ಜಯರಾಮ್ ಬನಾನ್ ಮತ್ತು ಮೈಸೂರಿನ ಪೂಜಾರಿ ಫಿಶ್ ಲ್ಯಾಂಡ್ ನ ಮಾಲಕರಾದ ಎಲ್.ಸುಧಾಕರ ಪೂಜಾರಿಯವರು ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಲಿದ್ದಾರೆ. ನಂತರ ಕ್ರೀಡಾ ಕೂಟ ಆರಂಭವಾಗಲಿದೆ ಎಂದರು.
ಸಂಜೆ 5.00 ಘಂಟೆಗೆ ಕರಾವಳಿ ಕರ್ನಾಟಕದ ಪ್ರಖ್ಯಾತ ಗಾಯಕರಾದ ಪ್ರಕಾಶ್ ಮಹಾದೇವನ್ ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ, ಬಳಿಕ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್, ವಿಧಾನ ಪರಿಷತ್ನ ಮಾನ್ಯ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಕೇಂದ್ರ ಸಚಿವರಾದ ಶ್ರೀಪದ್ ನಾಯಕ್, ಸಚಿವರಾದ ಮಧು ಬಂಗಾರಪ್ಪ, ಸಂಸದರುಗಳಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಜೇಶ್ ಚೌಟ, ಶಾಸಕರುಗಳಾದ ವಿ.ಸುನೀಲ್ ಕುಮಾರ್, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಚಲನಚಿತ್ರ ನಟ ಡಾ|ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ, ಚಿತ್ರನಟಿ,ಕುಮಾರಿ ಧನ್ಯರಾಮ್ ಕುಮಾರ್, ಯುವ ರಾಜಕುಮಾರ್, ಪ್ರಥ್ವಿ ಅಂಬರ್, ಹಾಗೂ ನಿರೂಪಕಿ ಅನುಶ್ರೀ ಆಗಮಿಸಲಿದ್ದಾರೆ, ಅಲ್ಲದೆ ಕ್ರೀಡಾ ಕ್ಷೇತ್ರದ ಪ್ರಮುಖರು, ವಿವಿಧ ಕ್ಷೇತ್ರದ ಪ್ರಮುಖರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕ್ರೀಡಾಕೂಟದಲ್ಲಿ ಪುರುಷರ ಹಾಗೂ ಮಹಿಳೆಯರ ಒಟ್ಟು 20 ತಂಡಗಳನ್ನು ಆಯ್ಕೆ ಮಾಡಲಾಗಿದ್ದು ಮಹಿಳೆಯರಿಗೆ ತ್ರೋಬಾಲ್ ಮತ್ತು ಹಗ್ಗ ಜಗ್ಗಾಟ, ಪುರುಷರಿಗೆ ವಾಲಿಬಾಲ್ ಮತ್ತು ಹಗ್ಗಜಗ್ಗಾಟ ಮತ್ತು ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿವಿಧ ಕ್ರೀಡಾವಳಿಗಳು ನಡೆಯಲಿದೆ. ಈಗಾಗಲೇ ಸರ್ವ ಬಿಲ್ಲವ ಸಂಘಗಳ ಸಹಕಾರದೊಂದಿಗೆ ತಂಡಗಳ ನೋಂದಣಿ ಆಗಿರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೀವನ್ ಕುಮಾರ್ ತೊಕ್ಕೊಟು, ಪ್ರಧಾನ ಕಾರ್ಯದರ್ಶಿ, ಸದಾನಂದ ಪೂಜಾರಿ, ಕ್ರೀಡಾ ಪ್ರಧಾನ ಸಂಚಾಲಕರು ಜಯಪ್ರಕಾಶ್, ಕ್ರೀಡಾ ಖಜಾಂಜಿ. ಶ್ರೀಮತಿ ಸುಮಲತಾ ಎನ್. ಸುವರ್ಣ, ಅಧ್ಯಕ್ಷರು, ಬಿಲ್ಲವರ ಮಹಿಳಾ ಸಂಘ ಮೊದಲಾದವರು ಉಪಸ್ಥಿತರಿದ್ದರು.











