ಮಂಗಳೂರು, ಜ.23 : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ವರ್ಷಾವಧಿ ಜಾತ್ರೆಯು ಜ.14 ಬುಧವಾರ ದಿಂದ ಜ.24 ಶನಿವಾರ ತನಕ ನಡೆಯುತ್ತಿದೆ.
ಜ.21 ಬುಧವಾರದಂದು ಕದ್ರಿ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ವರ್ಷಾವಧಿ ಮನ್ಮಹಾರಥೋತ್ಸವವು ವೈಭವದಿಂದ ನೆರವೇರಿತು.
ಕದ್ರಿ ಯೋಗೀಶ್ವರ ಮಠದ ಶ್ರೀ ರಾಜಾ ನಿರ್ಮಲ್‌ನಾಥಜೀ ದೇವಸ್ಥಾನಕ್ಕೆ ಆಗಮಿಸಿ ಮಂಜುನಾಥ ದೇವರ ದರ್ಶನ ಪಡೆದರು. ಬಳಿಕ ಅವರು ರಥಕ್ಕೆ ಒಂದು ಸುತ್ತು ಹಾಕಿ,ತೆಂಗಿನಕಾಯಿ ಒಡೆದು ಕುದುರೆ ಏರಿ ಮುಂದುವರಿಯುತ್ತಿದ್ದಂತೆ ಭಕ್ತರೆಲ್ಲರೂ ರಥ ಎಳೆದು ದೇವಸ್ಥಾನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಬಂದರು. ಮಧ್ಯಾಹ್ನ 12ಕ್ಕೆ ಮಹಾಪೂಜೆ, 1.30ಕ್ಕೆ ಮಂಜುನಾಥ ದೇವರ ರಥಾರೋಹಣ ನಡೆಯಿತು.
ಸಂಜೆ ಮಹಾರಥೋತ್ಸವದ ನಂತರ ದೇವರ ದರ್ಶನ ಬಲಿ, ಬೆಳ್ಳಿರಥೋತ್ಸವ, ಚಂದ್ರಮಂಡಲ ಉತ್ಸವ ನಡೆಯಿತು. ಬಳಿಕ ಮಹಾಪೂಜೆ, ಭೂತಬಲಿ, ಕವಾಟ ಬಂಧನ ಧ್ವಜಾವರೋಹಣ, ನಿತ್ಯ ಬಲಿ ನೆರವೇರಿತು.
ಜ. 24ರಂದು ಶ್ರೀ ದೇಗುಲದಿಂದ ಶ್ರೀ ಮಲರಾಯ ದೈವದ ಭಂಡಾರ ಹೊರಡುವುದು, ಮಧ್ಯಾಹ್ನ 12ಕ್ಕೆ ಸಂಪ್ರೋಕ್ಷಣೆ, ಶ್ರೀ ಅಣ್ಣಪ್ಪ ದೈವಕ್ಕೆ ವಾರ್ಷಿಕ ಪರ್ವ ಸೇವೆ, ರಾತ್ರಿ 9ಕ್ಕೆ ಶ್ರೀ ಮಲರಾಯ ಶ್ರೀ ಜಾರಂದಾಯ, ಶ್ರೀ ವೈದ್ಯನಾಥ ಮತ್ತು ಶ್ರೀ ಪಿಲಿಚಾಮುಂಡಿ ದೈವಗಳ ನೇಮ ಜರಗಲಿದೆ.











