ಮೂಡುಬಿದಿರೆ, ಜ. 28 : ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಇದರ ನೂತನ ಕಚೇರಿಯನ್ನು ಎಸ್‌ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಸೋಮವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕಲ್ಲಬೆಟ್ಟು ಸಹಕಾರಿ ಸಂಘದಿಂದ ವಿಭಜನೆಗೊಂಡು ಪ್ರತ್ಯೇಕ ಅಸ್ತಿತ್ವಕ್ಕೆ ಬಂದಿರುವ ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸ್ಥಳೀಯ ಜನತೆಗೆ ಉತ್ತಮ ಹಾಗೂ ಪರಿಣಾಮಕಾರಿ ಸೇವೆ ನೀಡಲು ಸಾಧ್ಯವಾಗಲಿದೆ. ಈ ಭಾಗದ ರೈತರಿಗೆ ಕೃಷಿ ಸಾಲ ಸೌಲಭ್ಯ ಲಭಿಸಬೇಕು. ಪ್ರವೀಣ್ ಕುಮಾರ್ ಅವರ ನೇತೃತ್ವದಲ್ಲಿ ಈ ಸಂಘ ಸದೃಢವಾಗಿ ಬೆಳೆಯಲಿ ಎಂದರು.
ಈ ಸಂದರ್ಭದಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ಶಿರ್ತಾಡಿ ಸಹಕಾರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ವಹಿಸಿದ್ದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್ ಪಡಿತರ ವಿಭಾಗವನ್ನು ಉದ್ಘಾಟಿಸಿದರು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರಾದ ಯುವರಾಜ ಜೈನ್ ಠೇವಣಿ ಪತ್ರವನ್ನು ಬಿಡುಗಡೆಗೊಳಿಸಿದರು.
ಎಂಸಿಎಸ್ ಸೊಸೈಟಿಯ ಅಧ್ಯಕ್ಷರಾದ ಬಾಹುಬಲಿ ಪ್ರಸಾದ್ ಅವರು ಉಳಿತಾಯ ಖಾತೆ ಪುಸ್ತಕವನ್ನು, ಸಿಇಒ ಚಂದ್ರಶೇಖರ್ ಎಂ. ಪದ್ಮಾಂಬ ಅವರು ವೋದಯ ಸ್ವಸಹಾಯ ಸಂಘದ ನಿರ್ಣಯ ಪುಸ್ತಕವನ್ನು ಹಸ್ತಾಂತರಿಸಿದರು. ಸಂಪತ್ ಸಾಮ್ರಾಜ್ಯ ಅವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ನವಮೈತ್ರಿ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ, ಹೊಸಬೆಟ್ಟು ಸಹಕಾರ ಸಂಘದ ಅಧ್ಯಕ್ಷ ರಾಜೇಶ್, ನಿರ್ದೇಶಕ ಪದ್ಮಪ್ರಸಾದ್ ಜೈನ್, ಪೆರಾಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಸತೀಶ್ ಕಾಶಿಪಟ್ಟ ನೆಲ್ಲಿಕಾರು ಸಹಕಾರಿ ಸಂಘದ ಅಧ್ಯಕ್ಷ ಜಯವರ್ಮ ಜೈನ್, ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಗ್ನೆಸ್ ಡಿಸೋಜಾ, ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್, ಶಿರ್ತಾಡಿ ಸಹಕಾರ ಸಂಘದ ಉಪಾಧ್ಯಕ್ಷ ಚಿಂತನ್ ಲೋಬೊ, ಸಿಇಒ ವಿಮಲಾಜಿ,ಸಂಘದ ನಿರ್ದೇಶಕರು ಮತ್ತಿತ್ತರರು ಉಪಸ್ಥಿತರಿದ್ದರು.











