ಮಂಗಳೂರು,ಫೆ.17: ಎಸ್‌ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್ ಯುಪಿಐ ಮತ್ತು ಐಎಂಪಿಎಸ್ ಸೌಲಭ್ಯಗಳ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ನಡೆಯಿತು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಮಾತಾಡಿ, ನಮ್ಮ ಬ್ಯಾಂಕ್ ಬೇರೆ ಬ್ಯಾಂಕ್ ಗಳಿಗಿಂತ ಹಿಂದೆ ಉಳಿಯಬಾರದು ಎಂಬ ಉದ್ದೇಶದಿಂದ ಈ ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ನಮ್ಮ ಶಾಖೆಯಲ್ಲಿ ಬಹುತೇಕ ಎಲ್ಲ ಸೇವೆಗಳನ್ನು ಹಿಂದಿನ ವರ್ಷಗಳಲ್ಲಿ ಅಳವಡಿಸಿಕೊಂಡು ಗ್ರಾಹಕ ಸ್ನೇಹಿಯಾಗಿ ಮುನ್ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅತ್ಯಾಧುನಿಕ ತಂತ್ರಜ್ಞಾನದ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ನಂದಕುಮಾರ್ ಅವರು ಮಾತಾಡಿ, ಐಎಂಪಿಎಸ್ ಮೂಲಕ ಶೀಘ್ರವಾಗಿ ತಕ್ಷಣವೇ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಿದೆ. ಈ ಸೇವೆಯ ಮೂಲಕ ನಮ್ಮ ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್ ಬಳಸಿ ಗ್ರಾಹಕರು ಕ್ಷಣಾರ್ಧದಲ್ಲಿ ಹಣ ವರ್ಗಾವಣೆ ಮಾಡುವ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಐಎಂಪಿಎಸ್ ಎಂಬುದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿ ಪಡಿಸಿದ ತ್ವರಿತ ಹಣ ವರ್ಗಾವಣೆ ವ್ಯವಸ್ಥೆಯಾಗಿದೆ. ಕಳೆದ ಐದು ವರ್ಷಗಳ ಹಿಂದೆ ಬ್ಯಾಂಕ್ ಅಧ್ಯಕ್ಷರು ತಮ್ಮ ಗ್ರಾಹಕರಿಗೆ ಈ ಸೇವೆಯನ್ನು ಕಲ್ಪಿಸುವ ಯೋಚನೆ ಮಾಡಿದ್ದರು. ಅದು ಇಂದು ಸಾಕಾರವಾಗಿದೆ ಎಂದರು.
ವೇದಿಕೆಯಲ್ಲಿ ಬ್ಯಾಂಕ್ ನಿರ್ದೇಶಕರು,ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಭಾಸ್ಕರ್ ಕೋಟ್ಯಾನ್, ರಮೇಶ್, ಬ್ಯಾಂಕ್ ಸಿಇಒ ಗೋಪಾಲಕೃಷ್ಣ ಭಟ್ ಹಾಗೂ ಬ್ಯಾಂಕ್ ನ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬೊಳ್ಯೊಟ್ಟು ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ರಾಜೀವ ಕಕ್ಕೆಪದವು ಕಾರ್ಯಕ್ರಮ ನಿರ್ವಹಿಸಿದರು.











