ಮಂಗಳೂರು, ಮಾ.28 : ಕಳವಾರು ಪೇಜಾವರ ಸಂತ ಜೋಸೆಫರ ದೇವಾಲಯದಲ್ಲಿ ಎರಡೂವರೆ ಶತಮಾನಗಳ ಹಿಂದೆ ಆರಂಭವಾದ ಯೇಸು ಕ್ರಿಸ್ತರ ಬದುಕಿನ ಕೊನೆಯ ದಿನದ ಕಷ್ಟ ಮತ್ತು ಯಾತನೆಯ ಕ್ಷಣಗಳನ್ನು ಸ್ಮರಿಸುವ ಶಿಲುಬೆಯ ಯಾತ್ರೆ ಈ ಬಾರಿ ಮಾ.31ರಂದು ನಡೆಯಲಿದೆ ನಡೆಯಲಿದೆ ಎಂದು ಪೇಜಾರ್ ವಲಯದ ಪ್ರಧಾನ ಧರ್ಮಗುರು ವಂ. ಫಾ. ರೂಡಾಲ್ಫ್ ರವಿ ಡೇಸಾ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ನಿರಂತರ ಪ್ರಾರ್ಥನೆ, ಸ್ತುತಿ ಆರಾಧನೆ ಹಾಗೂ ದೇವರ ವಾಕ್ಯದ ಮನನ ಕಾರ್ಯಕ್ರಮ ನಡೆಯಲಿದೆ. ಮಂಗಳೂರು ಧರ್ಮ ಪ್ರಾಂತ್ಯದ ಕ್ಯಾರಿಸ್ಮಾಟಿಕ್ ಸಂಚಾಲನ ಈ ಕಾರ್ಯಕ್ರಮ ನಡೆಸಿಕೊಡಲಿದ್ದು, 3 ಗಂಟೆಗೆ ಭಕ್ತಿ ಆಚರಣೆ, 3.30ಕ್ಕೆ ಪವಿತ್ರ ಪ್ರಸಾದದ ಆರಾಧನೆ ನಡೆಲಿದೆ. ಸಂಚಾಲನದ ನಿರ್ದೇಶಕ ವಂ. ಕ್ಲಿಫರ್ಡ್ ಫೆರ್ನಾಂಡಿಸ್ ಕಾರ್ಯ ನೆರವೇರಿಸಲಿದ್ದಾರೆ ಎಂದರು.
ಸಂಜೆ 5 ಗಂಟೆಗೆ ಪವಿತ್ರ ಬಲಿಪೂಜೆ ಹಾಗೂ 6 ಗಂಟೆಗೆ ಶಿಲುಬೆಯ ಹಾದಿ ಬಳಿಕ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರೆ. ಫಾ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹ ಅವರು ಆಶೀರ್ವಚನ ನೀಡಲಿದ್ದಾರೆ. ರಾತ್ರಿ 9 ಗಂಟೆಗೆ ಕಾರ್ಯಕ್ರಮ ಕೊನೆಗೊಳ್ಳಲಿದೆ. ರಾತ್ರಿ 9 ಗಂಟೆಗೆ ಕಾರ್ಯಕ್ರಮ ಕೊನೆಗೊಂಡ ಬಳಿಕ ಊಟದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 2.45ಕ್ಕೆ ಬಜಪೆ ಚೆಕ್ ಪೋಸ್ಟ್ನಿಂದ ಹಾಗೂ 3.30ಕ್ಕೆ ಜೋಕಟ್ಟೆ ಕೆಬಿಎಸ್ನಿಂದ ಕಳವಾರು ಚರ್ಚ್ ಗೆ ಪಾದಯಾತ್ರೆ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪೇಜಾರ್ ಚರ್ಚಿನ ಪ್ರಧಾನ ಧರ್ಮಗುರು ಫಾ. ರೊನಾಲ್ಡ್ ಡಿ‘ಸೋಜಾ , ಚರ್ಚ್ ನ ಪಾಲನಾ ಸಮಿತಿ ಉಪಾಧ್ಯಕ್ಷ ಕ್ಲಿಂಟನ್ ಡಿ‘ಸೋಜಾ, ಕಾರ್ಯದರ್ಶಿ ಸಿಲ್ವಿಯಾ ಪೇರಿಸ್, ಪ್ರಮುಖರಾದ ವಾಲ್ಟರ್ ಮೊಂತೆರೋ, ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.











