ಇಂಡೋನೇಷ್ಯಾ, ಏ. 02 : ಇಂಡೋನೇಷ್ಯಾದ ಉತ್ತರ ಮೊಲುಕ್ಕಾ ಸಮುದ್ರ ಪ್ರದೇಶದಲ್ಲಿ ಗುರುವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.
ಭೂಕಂಪದ ಕೇಂದ್ರಬಿಂದು ಟೆರ್ನೇಟ್ ನಗರದಿಂದ ಸುಮಾರು 127 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ. ಭೂಮಿಯ ಆಳದಿಂದ ಸುಮಾರು 35 ಕಿಲೋಮೀಟರ್ ಆಳದಲ್ಲಿ ಈ ಕಂಪನ ಉಂಟಾಗಿದೆ. ಭೂಕಂಪದ ಬೆನ್ನಲ್ಲೇ ಕರಾವಳಿ ಭಾಗದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿತ್ತಾದರೂ, ಕೆಲವು ತಾಸಿನ ಬಳಿಕ ಸುನಾಮಿ ಆತಂಕ ದೂರವಾಗಿದೆ ಎಂದು ಇಂಡೋನೇಷ್ಯಾದ ಹವಾಮಾನ ಇಲಾಖೆ ತಿಳಿಸಿದೆ.
ಭೂಕಂಪದ ಹಿನ್ನೆಲೆಯಲ್ಲಿ ಇಂಡೋನೇಷ್ಯಾ ಸೇರಿದಂತೆ ಫಿಲಿಪೈನ್ಸ್ ಮತ್ತು ಮಲೇಷ್ಯಾ ಕರಾವಳಿ ತೀರಗಳಲ್ಲಿ ಸುನಾಮಿ ಸಂಭವಿಸುವ ಸಾಧ್ಯತೆಯಿದೆ. ಸಮುದ್ರದ ಅಲೆಗಳು ಸುಮಾರು 0.3 ರಿಂದ 1 ಮೀಟರ್ ಎತ್ತರದವರೆಗೆ ಏಳುವ ಸಾಧ್ಯತೆಯಿದೆ ಎಂದು ಅಮೆರಿಕದ ಸುನಾಮಿ ಮುನ್ನೆಚ್ಚರಿಕೆ ಕೇಂದ್ರ ತಿಳಿಸಿತ್ತು.
ಭೂಕಂಪದ ತೀವ್ರತೆಗೆ ಕನಿಷ್ಠ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಹಾಗೂ ಹಲವು ಕಡೆಗಳಲ್ಲಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.











