ಮಂಗಳೂರು,ಏ. 04 : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2025-26ನೇ ಹಣಕಾಸು ವರ್ಷದಲ್ಲಿ ₹20,226.19 ಕೋಟಿಗಳ ದಾಖಲೆಯ ಒಟ್ಟು ವ್ಯವಹಾರ ನಡೆಸಿದೆ. ಮಾರ್ಚ್ ತಿಂಗಳ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ರೂ.131.14ಕೋಟಿ ಲಾಭ ಗಳಿಸಿದೆ ಎಂದು ಶನಿವಾರ ಬ್ಯಾಂಕಿನ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಕಳೆದ ವರ್ಷಕ್ಕೆ ಹೋಲಿಸಿದರೆ ವ್ಯವಹಾರದಲ್ಲಿ ಶೇ.16.47 ರಷ್ಟು ಏರಿಕೆ ಕಂಡಿದೆ. ಅಷ್ಟೇ ಅಲ್ಲದೆ, ₹131.14 ಕೋಟಿಗಳ ನಿವ್ವಳ ಲಾಭ ಗಳಿಸಿದೆ. ಇದು ಕಳೆದ ವರ್ಷದ ಲಾಭಕ್ಕಿಂತ ಶೇ.18.78 ರಷ್ಟು ಹೆಚ್ಚಳವಾಗಿದೆ. ಬ್ಯಾಂಕಿನ ಅನುತ್ಪಾದಕ ಆಸ್ತಿ (NPA) ಪ್ರಮಾಣವು ಶೇ.2.21ಕ್ಕೆ ಇಳಿಕೆಯಾಗಿದ್ದು, ಇದು ಬ್ಯಾಂಕಿನ ಆರ್ಥಿಕ ಸುಸ್ಥಿತಿಯನ್ನು ಬಿಂಬಿಸುತ್ತದೆ ಎಂದರು.
ಬ್ಯಾಂಕ್ ಒಟ್ಟು ₹9264.64 ಕೋಟಿಗಳ ಠೇವಣಿ ಸಂಗ್ರಹಿಸಿದ್ದು, ಕಳೆದ ಸಾಲಿಗಿಂತ ಶೇ.17.53 ರಷ್ಟು ಪ್ರಗತಿ ಸಾಧಿಸಿದೆ. ಮುಂಗಡ ವಿಭಾಗದಲ್ಲಿ ಒಟ್ಟು ₹9766.75 ಕೋಟಿಗಳ ಸಾಲ ವಿತರಿಸಲಾಗಿದ್ದು, ಇದರಲ್ಲಿ ಕೃಷಿ ಕ್ಷೇತ್ರಕ್ಕೆ ₹2340.08 ಕೋಟಿಗಳ ಸಾಲ ನೀಡಲಾಗಿದೆ ಎಂದು ತಿಳಿಸಿದರು.
ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿರುವ ಬ್ಯಾಂಕ್, ಯುಪಿಐ (UPI), ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ (IMPS) ಮತ್ತು ಟ್ಯಾಬ್ ಬ್ಯಾಂಕಿಂಗ್ ಸೇವೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಈಗಾಗಲೇ 1.44 ಲಕ್ಷಕ್ಕೂ ಅಧಿಕ ರೈತರಿಗೆ ‘ರುಪೇ’ ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸಲಾಗಿದೆ. ಗ್ರಾಹಕರ ಮನೆ ಬಾಗಿಲಿಗೇ ಬ್ಯಾಂಕಿಂಗ್ ಸೇವೆ ‘ಬ್ಯಾಂಕ್ ಆನ್ ವೀಲ್ಸ್’ (Bank on Wheel) ಯೋಜನೆ ಮತ್ತು ಮೊಬೈಲ್ ಆಪ್ ಮೂಲಕ ಹಣ ವರ್ಗಾವಣೆ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಿದೆ ಎಂದರು.
ಸ್ತ್ರೀ ಶಕ್ತಿ ಸಂಘಗಳ ಸಬಲೀಕರಣದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಹೊಂದಿದ್ದು, 34,765 ಗುಂಪುಗಳನ್ನು ಹೊಂದಿದೆ. ಬ್ಯಾಂಕಿನ ಸರ್ವಾಂಗೀಣ ಸಾಧನೆಗಾಗಿ 23 ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಹಾಗೂ 19 ಬಾರಿ ನಬಾರ್ಡ್ ಪ್ರಶಸ್ತಿಗಳು ಸಂದಿವೆ ಎಂದು ಅವರು ತಿಳಿಸಿದರು.
ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಮುಂದಿನ ಅವಧಿಯಲ್ಲಿ 10 ಹೊಸ ಶಾಖೆಗಳನ್ನು ತೆರೆಯಲು ಯೋಜಿಸಲಾಗಿದೆ. ಪ್ರಸ್ತುತ ಬ್ಯಾಂಕಿನ ಎಲ್ಲಾ ಶಾಖೆಗಳು ಗಣಕೀಕೃತಗೊಂಡಿದ್ದು, ಆರ್.ಟಿ.ಜಿ.ಎಸ್ ಮತ್ತು ನೆಫ್ಟ್ ಸೌಲಭ್ಯಗಳನ್ನು ಹೊಂದಿವೆ. ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡಲು 20 ಶಾಖೆಗಳನ್ನು ಸಂಪೂರ್ಣ ಹವಾನಿಯಂತ್ರಿತಗೊಳಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಬೆಳಪು ದೇವಿಪ್ರಸಾದ್ ಶೆಟ್ಟಿ ನಿರ್ದೇಶಕರುಗಳಾದ ಭಾಸ್ಕರ್ ಎಸ್.ಕೋಟ್ಯಾನ್, ಎಂ. ವಾದಿರಾಜ ಶೆಟ್ಟಿ, ಶಶಿಕುಮಾರ್ ರೈ ಬಾಲೊಟ್ಟು, ಎಸ್.ಬಿ. ಜಯರಾಮ ರೈ, ಸದಾಶಿವ ಉಳ್ಳಾಲ್, ಮೋನಪ್ಪ ಶೆಟ್ಟಿ ಎಕ್ಕಾರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ. ಮತ್ತಿತರರು ಉಪಸ್ಥಿತರಿದ್ದರು.











