ಮಂಗಳೂರು,ಏ. 14 : ಮಂಗಳೂರಿನ ಪುರಭವನದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನ, ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ರವಿವಾರ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ವಿಶ್ವಜಿತ್ ಶೆಟ್ಟಿ ಸವಣೂರು ಅವರು ದೀಪ ಬೆಳಗಿಸಿ ಹಾಗೂ ಕಳಸದಲ್ಲಿದ್ದ ತೆಂಗಿನ ಸಿರಿಯನ್ನು ಅರಳಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತಾಡಿದ ಅವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂಚೂಣಿಯಲ್ಲಿದ್ದರೂ, ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಸಕ್ತಿ ತೋರುತ್ತಿಲ್ಲ. ಸಮುದಾಯದ ವಿದ್ಯಾರ್ಥಿಗಳು ಇಂತಹ ಸ್ಪರ್ಧಾತ್ಮಕ ಪರೀಕ್ಷೆಯ ಕಡೆಗೆ ಆಸಕ್ತಿ ವಹಿಸುವುದು ಮುಖ್ಯ ಎಂದು ಕರ್ನಾಟಕ ಹೈಕೋರ್ಟ್ನ ನ್ಯಾಯಾಧೀಶರಾದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಸವಣೂರು ಹೇಳಿದರು.
ರಾಜ್ಯ ಹೈಕೋರ್ಟ್ನ ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾವೇಶದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಡಾ. ಕೊಡಾಣ್ ನಾಗಪ್ಪ ಆಳ್ವ ಮತ್ತು ಶ್ರೀಮತಿ ಕಲ್ಯಾಣಿ ಆಳ್ವ ಸ್ಮರಣಾರ್ಥ ಪ್ರಶಸ್ತಿ ಹಾಗೂ ಸನ್ಮಾನಗಳನ್ನು ನೀಡಿ ಗೌರವಿಸಲಾಯಿತು. ಈ ಸಾಲಿನಲ್ಲಿ ಡಾ. ಸತೀಶ್ ಭಂಡಾರಿ (ವೈದ್ಯಕೀಯ), ಪ್ರೊ. ವಸಂತ್ ಶೆಟ್ಟಿ ಮುಳ್ಳಾಡ್ (ಶೈಕ್ಷಣಿಕ), ಕೆ. ಉಷಾ ಪಿ. ರೈ (ಸಾಹಿತ್ಯ), ಗುರುಕಿರಣ್ ಶೆಟ್ಟಿ (ಸಂಗೀತ), ವಿದುಷಿ ನಯನ ವಿ. ರೈ ಕುದ್ರಾಡಿ (ನೃತ್ಯ), ಲೆ. ಕರ್ನಲ್ ಅಜಿತ್ ಕುಮಾ ಶೆಟ್ಟಿ (ದೇಶ ಸೇವೆ), ಪ್ರಶಾಂತ್ ರೈ ಪುತ್ತೂರು ಮತ್ತು ಚಿಂತನ್ ಎಸ್. ಶೆಟ್ಟಿ (ಕ್ರೀಡೆ) ಅವರು ಪ್ರಶಸ್ತಿ ಸ್ವೀಕರಿಸಿದರು.
ಸಮಾರಂಭದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಕೈಗಾರಿಕಾ ಕ್ಷೇತ್ರದಲ್ಲಿ ವಿವೇಕ್ ಶೆಟ್ಟಿ ಬೊಳ್ಯಗುತ್ತು ಮತ್ತು ಕರುಣಾಕರ ಶೆಟ್ಟಿ ಮದ್ಯಗುತ್ತು ಸಾಂಸ್ಕೃತಿಕ ರಂಗದಲ್ಲಿ ಪ್ರಕಾಶ್ ಭಂಡಾರಿ, ಧಾರ್ಮಿಕ ಕ್ಷೇತ್ರದಲ್ಲಿ ಕೆ. ಕೆ. ಶೆಟ್ಟಿ ಕುತ್ತಿಕಾ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಆತಿಥ್ಯ ಉದ್ಯಮದಲ್ಲಿ ವೇಣುಗೋಪಾಲ್ ಎಲ್.ಶೆಟ್ಟಿ, ನಿರ್ಮಾಣ ಕ್ಷೇತ್ರದಲ್ಲಿ ಮುಗೋಡಿ ಸುಧಾಕರ್ ಶೆಟ್ಟಿ, ಸಂಶೋಧನಾ ಕ್ಷೇತ್ರದಲ್ಲಿ ಡಾ. ನವೀನ್ ಚಂದ್ರ ಶೆಟ್ಟಿ, ಮತ್ತು ದೈವಾರಾಧನೆ ಕ್ಷೇತ್ರದಲ್ಲಿ ಡಾ. ಅಶೋಕ್ ಆಳ್ವ ಅವರು ಗೌರವಕ್ಕೆ ಪಾತ್ರರಾದರು. ಸಮಾಜ ಸೇವೆಯಲ್ಲಿ ಕಂಚನೂರು ಸೋಮಶೇಖರ ಶೆಟ್ಟಿ, ಶಿಕ್ಷಣ ಕ್ಷೇತ್ರದಲ್ಲಿ ದಿನೇಶ್ ಆಳ್ವ ಕೃಷಿ ಕ್ಷೇತ್ರದಲ್ಲಿ ಮುರ ಸದಾಶಿವ ಶೆಟ್ಟಿ ಎಕ್ಕಾರು, ಕೃಷಿ ಅಭಿವೃದ್ಧಿಗಾಗಿ ಡಾ. ಸರಿತಾ ಹೆಗ್ಡೆ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ರವೀಂದ್ರನಾಥ ಮಾರ್ಲ ಅವರನ್ನು ಸನ್ಮಾನಿಸಲಾಯಿತು.
ಕಲೆ ಮತ್ತು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪಿ. ಕಿಶನ್ ಹೆಗ್ಡೆ ಅವರಿಗೆ ವಿಶೇಷ ಗೌರವ ಸಮರ್ಪಿಸಲಾಯಿತು. ಕೊಡ್ಯಾಣ್ ಮೋಹನದೇವ ಆಳ್ವ ಹಾಗೂ ಡಾ. ಎಮ್. ಕೆ. ಶೈಲಜಾ ಆಳ್ವ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಕೋಶಾಧಿಕಾರಿ ಸಿಎ ರಾಮ್ ಮೋಹನ್ ರೈ, ಪ್ರಧಾನ ಕಾರ್ಯದರ್ಶಿ ಕೆ. ಎಮ್. ಶೆಟ್ಟಿ, ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೇಡಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ದಿವ್ಯ ವಿ. ಶೆಟ್ಟಿ ಪ್ರಾರ್ಥಿಸಿದರು, ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.











