ಮಂಗಳೂರು,ಏ.22 : ಪ್ರಾರ್ಥನಾ ಕ್ರಿಯೇಷನ್ಸ್ ಮಂಗಳೂರು ಲಾಂಛನದಲ್ಲಿ ಆರ್.ಧನರಾಜ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಬಹುಭಾಷಾ ಚಿತ್ರ “ಕೊರಗ್ಲಾ ತನಿಯಾ” ಮತ್ತು “ಕನ” ತುಳು ಚಲನಚಿತ್ರದ ಮುಹೂರ್ತ ಸಮಾರಂಭವು ಏಪ್ರಿಲ್ 23 ಗುರುವಾರ ಬೆಳಿಗ್ಗೆ 9 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ದೇಶಕ ಆರ್.ಧನರಾಜ್ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. “ಕೊರಗ್ಲಾ ತನಿಯಾ” ಸಿನಿಮಾಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರಂಭ ಫಲಕ ತೋರಿಸಲಿದ್ದಾರೆ. ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಕ್ಯಾಮರಾ ಚಾಲನೆಗೈಯಲಿದ್ದಾರೆ.ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
“ಕನ” ತುಳು ಸಿನಿಮಾಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಆರಂಭ ಫಲಕ ತೋರಿಸಲಿದ್ದಾರೆ. ವಿಧಾನ ಸಭಾಧ್ಯಕ್ಷರಾದ ಯು.ಟಿ ಖಾದರ್ ಮತ್ತು ಬಹುಭಾಷಾ ನಟ ಸುಮನ್ ತಲ್ವಾರ್ ದೀಪ ಬೆಳಗಿಸಲಿದ್ದಾರೆ. ಶಾಸಕರಾದ ಸಿ.ಬಿ.ಸುರೇಶ್ ಬಾಬು ಕ್ಯಾಮರ ಚಾಲನೆಗೈಯಲಿದ್ದಾರೆ.
ಸಂಸದರು, ಶಾಸಕರು ಸಹಿತ ಅನೇಕ ಮಂದಿ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬಹುಭಾಷಾ “ಕೊರಗ್ಲಾ ತನಿಯಾ” ಸಿನಿಮಾಕ್ಕೆ ಆರ್. ಧನರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣದೊಂದಿಗೆ ನಿರ್ದೇಶನ ಮಾಡಲಿದ್ದಾರೆ. “ಕನ” ತುಳು ಸಿನಿಮಾಕ್ಕೆ ವಿಶ್ವನಾಥ್ ಕೋಡಿಕಲ್ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಲಿದ್ದಾರೆ. ಅರ್ಚನ ಶೆಟ್ಟಿ ಎರಡೂ ಸಿನಿಮಾಗಳ ಸಹ ನಿರ್ಮಾಪಕಿಯಾಗಿದ್ದಾರೆ ಎಂದರು.











