ಮಂಗಳೂರು, ಮೇ15 : ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ (ICAI) ಮಂಗಳೂರು ಶಾಖೆಯ ವತಿಯಿಂದ ಚಾರ್ಟರ್ಡ್ ಅಕೌಂಟೆಂಟ್ ಸದಸ್ಯರಿಗಾಗಿ ‘ಅಧಿಗಮ – ಜ್ಞಾನ ಬಲವರ್ಧನೆ’ ಎಂಬ ಶೀರ್ಷಿಕೆಯಡಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಖೆಯ ಅಧ್ಯಕ್ಷರಾದ ಸಿಎ ಡ್ಯಾನಿಯಲ್ ಮಾರ್ಷ್ ಪೆರಿಯೆರಾ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕೊಂಚಾಡಿ ಮೆರಿಹಿನಲ್ಲಿರುವ ‘ ಪಾಲೆಮಾರ್ ಕನ್ವೆನ್ಸನ್ ಸೆಂಟರ್’ನಲ್ಲಿ ಮೇ 15 ಮತ್ತು 16 ರಂದು ಈ ಬೃಹತ್ ಸಮ್ಮೇಳನ ನಡೆಯಲಿದೆ. ದೇಶದ ವಿವಿಧ ಭಾಗಗಳಿಂದ ಸುಮಾರು 500ಕ್ಕೂ ಹೆಚ್ಚು ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ವೃತ್ತಿಪರರು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ವೃತ್ತಿಯಲ್ಲಿನ ಉದಯೋನ್ಮುಖ ಬೆಳವಣಿಗೆಗಳು, ತಂತ್ರಜ್ಞಾನ ಆಧಾರಿತ ರೂಪಾಂತರ ಮತ್ತು ಪ್ರಸಕ್ತ ಹಣಕಾಸು ನಿಯಂತ್ರಣ ಬದಲಾವಣೆಗಳ ಬಗ್ಗೆ ವೃತ್ತಿಪರರನ್ನು ಸಜ್ಜುಗೊಳಿಸುವುದು ಈ ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ ಎಂದರು.
ಮೇ 15ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಸಹ- ಕುಲಾಧಿಪತಿಗಳಾದ ಪ್ರೊ. ಶಾಂತಾರಾಮ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮ್ಮೇಳನವು ಒಟ್ಟು ಏಳು ತಾಂತ್ರಿಕ ಅಧಿವೇಶನಗಳನ್ನು ಒಳಗೊಂಡಿರಲಿದ್ದು, ಸೈಬರ್ ಭದ್ರತೆ, ಉತ್ತರಾಧಿಕಾರ ಯೋಜನೆ (Succession Planning), ಡಿಜಿಟಲ್ ಯುಗದಲ್ಲಿನ ವೃತ್ತಿಪರ ಅವಕಾಶಗಳು ಮತ್ತು 2025ರ ಆದಾಯ ತೆರಿಗೆ ಕಾಯ್ದೆಯಡಿ ಮರು-ಮೌಲ್ಯಮಾಪನ ಪ್ರಕ್ರಿಯೆಗಳ ಕುರಿತು ದೇಶದ ಖ್ಯಾತ ವಿಷಯ ತಜ್ಞರು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಖೆಯ ಉಪಾಧ್ಯಕ್ಷರಾದ ಸಿಎ ಮಮತಾ ರಾವ್, ಕಾರ್ಯದರ್ಶಿ ಸಿಎ ಬಾಲಸುಬ್ರಹ್ಮಣ್ಯ ಎನ್., ಖಜಾಂಚಿ ಸಿಎ ನಿತಿನ್ ಬಾಳಿಗಾ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.











