ಮಂಗಳೂರು, ಜೂ. 01 : ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆ ಚಟುವಟಿಕೆಗಳು ಇಂದಿನಿಂದ ಬಹುತೇಕ ಸ್ಥಗಿತಗೊಳ್ಳಲಿವೆ. ಮಳೆಗಾಲವು ಮೀನುಗಳ ಸಂತಾನೋತ್ಪತ್ತಿಯ ಕಾಲವಾಗಿದೆ. ಅದ್ದರಿಂದ ಅವುಗಳ ರಕ್ಷಣೆಗಾಗಿ 61 ದಿನಗಳ ಕಾಲ ಯಾಂತ್ರೀಕೃತ ಬೋಟ್‌ಗಳು ಸಮುದ್ರಕ್ಕೆ ಇಳಿಯದಂತೆ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಅವಧಿಯಲ್ಲಿ ಯಾಂತ್ರಿಕ ದೋಣಿಗಳು ಸಮುದ್ರಕ್ಕೆ ಇಳಿದರೆ ಮೀನುಗಳ ಸಂತಾನೋತ್ಪತ್ತಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆ ದ.ಕ. ಜಿಲ್ಲೆಯಲ್ಲಿ 61 ದಿನಗಳ ಕಾಲ ನಿಷೇಧ ಹೇರಲಾಗಿದೆ. ಈ ಅವಧಿಯಲ್ಲಿ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಹೆಚ್ಚಿನ ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳು ಮುಂದಿನ ಎರಡು ತಿಂಗಳ ಕಾಲ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಈ ಅವಧಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿದ್ದರೂ ಸಾಂಪ್ರದಾಯಿಕ ನಾಡದೋಣಿಗಳಿಗೆ ಮೀನುಗಾರಿಕೆ ಮುಂದುವರಿಸಲು ಅನುಮತಿ ನೀಡಲಾಗಿದೆ. ನಾಡದೋಣಿ ಮತ್ತು ಬಲೆಗಳನ್ನು ಬಳಸುವ ಮೀನುಗಾರರು 10 ಅಶ್ವಶಕ್ತಿಯ ಇಂಜಿನ್ ಅನ್ನು ಬಳಸಿ ಸಮುದ್ರದ ಬದಿ, ನದಿ ತೀರದಲ್ಲಿ ಮೀನುಗಾರಿಕೆ ನಡೆಸಬಹುದಾಗಿದೆ.











