ಮೂಡಬಿದಿರೆ, ಜೂ. 05 : ಕಟ್ಟಡವೊಂದಕ್ಕೆ ಶೀಟು ಅಳವಡಿಸುವ ವೇಳೆ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಗುರುವಾರ ಕಡಪಳ್ಳ ಗಾಂಧಿನಗರದಲ್ಲಿ ನಡೆದಿದೆ.
ಮೃತನನ್ನು ಮಾರ್ಪಾಡಿ ಗ್ರಾಮದ ಪಾದೆಮನೆ ನಿವಾಸಿ ಶೌರ್ಯ ಆಚಾರ್ಯ ಎಂದು ಗುರುತಿಸಲಾಗಿದೆ.
ಕಡಪಳ್ಳ ಗಾಂಧಿನಗರದಲ್ಲಿರುವ ರಾಯಲ್ ಪ್ಯಾರಡೈಸ್ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಶೀಟು ಅಳವಡಿಸುವ ಕಾಮಗಾರಿಯಲ್ಲಿ ತೊಡಗಿದ್ದ ವೇಳೆ ಸಮತೋಲನ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದ ಕಾರಣ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕಟ್ಟಡದ ಗುತ್ತಿಗೆದಾರ ಪ್ರವೀಣ್ ಹಾಗೂ ಮಾಲಕರಾದ ನೋರ್ಟ್ ಶಾಬಾ ರೇಗೋ ಅವರು ಕಾಮಗಾರಿ ವೇಳೆ ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಸಾಮಾಗ್ರಿಗಳನ್ನು ನೀಡದಿರುವುದೇ ಈ ದುರಂತಕ್ಕೆ ಕಾರಣವೆನ್ನಲಾಗಿದ್ದು ಈ ಕುರಿತು ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










