ಮಂಗಳೂರು:ಬೀಡಿ ಕಾರ್ಮಿಕರ ಈಗಿರುವ ಆರ್ಥಿಕ ಹಾಗೂ ಆರೋಗ್ಯಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರ ಉನ್ನತ್ತಿಗೆ ಕೇಂದ್ರ ಸರಕಾರ ಪ್ರತ್ಯೇಕ ಕಾನೂನು ರೂಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯ್ಲಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ ಹಾಗೂ ಸೌತ್ ಕೆನರಾ-ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟರ್‍ಸ್ ಯೂನಿಯನ್ (ಎಚ್‌ಎಂಎಸ್ ಸಂಯೋಜಿತ) ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ರವಿವಾರ ಜರಗಿದ ಬೀಡಿ ಕಾರ್ಮಿಕರ ಸಮಾವೇಶ ಹಾಗೂ ಬೀಡಿ ಬದುಕು ಅಧ್ಯಯನ ಗ್ರಂಥವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬೀಡಿ ಉದ್ಯಮ ಆರ್ಥಿಕತೆಗೆ ದೊಡ್ಡ ಶಕ್ತಿ ನೀಡಿದೆ. ಬೀಡಿ ಉದ್ಯಮಕ್ಕೆ ಶೇ.28 ಜಿಎಸ್‌ಟಿ ವಿಧಿಸಿರುವುದು ಕಾರ್ಮಿಕರಿಗೆ, ಉದ್ಯಮಕ್ಕೆ ಬಹುದೊಡ್ಡ ಹೊಡೆತ ನೀಡಲಿದೆ. ಅದುದರಿಂದ ಬೀಡಿ ಉದ್ಯಮಕ್ಕೆ ಜಿಎಸ್‌ಟಿಯಿಂದ ಸಂಪೂರ್ಣ ವಿನಾಯತಿ ನೀಡಬೇಕುಎಂದು ಅಭಿಪ್ರಾಯ ಪಟ್ಟಿದ್ದಾರೆ.
ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ ಬೀಡಿ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಹೇಳಿದರು.
ಶಾಸಕ ಯು.ಟಿ.ಖಾದರ್ ಅವರು ಮಾತನಾಡಿ ತಂಬಾಕು ಕಾರ್ಮಿಕರ ವೆಲ್ಫೇರ್ ಮಂಡಳಿಯ ಮಾದರಿಯಲ್ಲೆ ಬೀಡಿ ಕಾರ್ಮಿಕರ ಕಲ್ಯಾಣಕ್ಕೆ ಬೀಡಿ ಕಾರ್ಮಿಕರ ಅಭಿವೃದ್ಧಿ ಮಂಡಳಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೂಪಿಸಬೇಕು ಎಂದು ಹೇಳಿದರು.
ಗಣೇಶ್ ಬೀಡಿ ಸಂಸ್ಥೆಯ ಪಾಲುದಾರ ಕಾಳಿದಾಸ್, ಮಂಗಳೂರು ಅಂಚೆ ಅಧೀಕ್ಷಕ ಶ್ರೀ ಹರ್ಷ ಅವರು ಬೀಡಿ ಕಾರ್ಮಿಕರಿಗೆ ಜೀವನ್ ಪ್ರಮಾಣ ಪತ್ರದ ಬಗ್ಗೆ ವಿವರಿಸಿದರು.
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ ಮಹಮ್ಮದ್ ರಫಿ ಪ್ರಸ್ತಾವನೆಗೈದರು.ಎಚ್‌ಎಂಎಸ್ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಸ್ವಾಗತಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್ ಕೆ.ಎಸ್.,ಜಾತ್ಯತೀತ ಜನತಾದಳದ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ , ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ, ಕೋಶಾಧಿಕಾರಿ ಇಸ್ಮಾಯಿಲ್, ಪಿ.ಎಚ್.ಮೊಹಮ್ಮದ್, ಪ್ರಶಾಂತ್, ಸಯ್ಯದ್ ಹುಸೈನ್ ಕೋಯಾ ಮತ್ತಿತರರು ಉಪಸ್ಥಿತರಿದ್ದರು.