ಉಡುಪಿ: ಅಜಾಗರುಕತೆಯಿಂದ ಬೈಕ್ ಚಲಾಯಿಸಿ ಪಾದಚಾರಿಯ ಸಾವಿಗೆ ಕಾರಣರಾದ ಆರೋಪಿಗೆ ನಗರದ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
2018ರ ಡಿಸೆಂಬರ್ 17ರಂದು ಅಪರಾಹ್ನ 3.50ರ ಸುಮಾರಿಗೆ ಉಪ್ಪೂರು ಮೂಡುಅಮ್ಮುಂಜೆಯ ಆಶಿಶ್ ಶೆಟ್ಟಿ ಎಂಬಾತ ಉಡುಪಿ ಪುತ್ತೂರು ಗ್ರಾಮದ ಜಂಕ್ಷನ್ ಬಸ್ ನಿಲ್ದಾಣದ ಬಳಿ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ ಕಾರಣ ರಸ್ತೆ ಬದಿ ನಿಂತಿದ್ದ ನಾಗೇಶ್ ಡಿ ಪ್ರಭು ಎಂಬವರಿಗೆ ಬೈಕ್ ಡಿಕ್ಕಿಯಾಗಿ ಅವರು ರಸ್ತೆಗೆ ಎಸೆಯಲ್ಪಟ್ಟು, ತಲೆ ಹಾಗೂ ದೇಹದ ಇತರ ಭಾಗಗಳು ತೀವ್ರಗಾಯಗೊಂಡು ಮೃತಪಟ್ಟಿದ್ದರು.
ಈ ಕುರಿತು ಉಡುಪಿ ಸಂಚಾರ ಠಾಣೆಯ ಪೊಲೀಸ್ ವೃತ್ತ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಇದೀಗ ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಅವರು ಆರೋಪಿ ಆಶಿಶ್ ಶೆಟ್ಟಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ರೂ.10 ಸಾವಿರ ದಂಡ ವಿಧಿಸಿ, ತೀರ್ಪು ನೀಡಿದ್ದಾರೆ