ಅಥೆನ್ಸ್, ಮಾ. 01 : ಎರಡು ರೈಲುಗಳ ನಡುವೆ ಪರಸ್ಪರ ಢಿಕ್ಕಿ ಸಂಭವಿಸಿ 32 ಮಂದಿ ಸಾವನ್ನಪ್ಪಿದ ಘಟನೆ ಗ್ರೀಸ್ ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಈ ಘಟನೆಯಲ್ಲಿ 85ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಥೆನ್ಸ್ ಉತ್ತರ ನಗರ ಥೆಸಲೋನಿಕಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ರೈಲು ಮತ್ತು ಮಧ್ಯ ಗ್ರೀಸ್ ನ ಲಾರಿಸ್ಸಾ ನಗರದಿಂದ ಬರುತ್ತಿದ್ದ ಸರಕು ಸಾಗಣೆ ರೈಲುಗಳ ನಡುವೆ ಢಿಕ್ಕಿ ಸಂಭವಿಸಿದೆ. ಅಪಘಾತದಿಂದಾಗಿ ಹಲವು ಬೋಗಿಗಳು ಹಳಿತಪ್ಪಿದ್ದು, ಈ ಪೈಕಿ 3 ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಪ್ರಯಾಣಿಕ ರೈಲಿನಲ್ಲಿದ್ದ 350 ಮಂದಿ ಪ್ರಯಾಣಿಕರ ಪೈಕಿ 32 ಮಂದಿ ಮೃತಪಟ್ಟಿದ್ದು, 85 ಮಂದಿ ಗಾಯಗೊಂಡಿದ್ದಾರೆ . ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 250 ಮಂದಿಯನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ ಎನ್ನಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.