ಉಳ್ಳಾಲ, ಮಾ. 27: ನೇತ್ರಾವತಿ ನದಿಗೆ ಕಾಲುಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹರೇಕಳದಲ್ಲಿ ನಡೆದಿದೆ. ಮೃತರನ್ನು ಹರೇಕಳ ಬೈತಾರ್ ನಿವಾಸಿ ಪ್ರಕಾಶ್ ಗಟ್ಟಿ (46) ಎಂದು ಗುರುತಿಸಲಾಗಿದೆ.
ಪ್ರಕಾಶ್ ಅವರು ಹರೇಕಳದ ಉಳಿದೊಟ್ಟು ಬಳಿಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ನಡೆಯುತ್ತಿದ್ದ ವಾರ್ಷಿಕ ಜಾತ್ರೋತ್ಸವಕ್ಕೆ ಹೋಗಿದ್ದರು.ಅಲ್ಲಿಂದ ಅವರು ಸ್ನೇಹಿತರೊಂದಿಗೆ ತಮ್ಮ ತೋಟದ ಬಳಿಯಿರುವ ನೇತ್ರಾವತಿ ನದಿ ತೀರಕ್ಕೆ ತೆರಳಿದ್ದರು. ಅಲ್ಲಿ ನದಿ ನೀರಿಗೆ ಅಡ್ಡವಾಗಿ ಹಾಕಿದ ಅಡಿಕೆ ಮರದ ಮೇಲಿಂದ ನಡೆದುಕೊಂಡು ಹೋಗುವಾಗ ಆಕಸ್ಮಿಕ ಕಾಲುಜಾರಿ ಬಿದ್ದು , ನದಿ ನೀರಿನ ಹೂಳಿನಲ್ಲಿ ಹೂತುಹೋಗಿದ್ದರು. ಈಜಲು ಪರಿಣತರಾಗಿದ್ದರೂ ಮೇಲೆ ಬರಲು ಸಾಧ್ಯವಾಗದೇ, ನದಿ ನೀರಿನಲ್ಲಿ ಮುಳುಗಿದ್ದಾರೆ.
ಉತ್ತರಪ್ರದೇಶ ಮೂಲದ ಮರಳು ತೆಗೆಯುವ ಕಾರ್ಮಿಕರು ಶೋಧ ನಡೆಸಿ ಮೇಲಕ್ಕೆ ಎತ್ತಿ, ಪ್ರಕಾಶ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.