ಮಂಗಳೂರು ಮಾ. 28: ‘ತುಳು ಕೂಟ ಕುಡ್ಲ’ದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ನಡೆಯುವ ಸರಣಿ ಕಾರ್ಯಕ್ರಮದ ಭಾಗವಾಗಿ ರವಿವಾರ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ‘ತುಳು ಕುಣಿತ ಭಜನ ಸ್ಪರ್ಧೆ 2023’ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಅಖಿಲ ಭಾರತ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ ಅವರು ಉದ್ಘಾಟಿಸಿದರು. ಬಳಿಕ ಮಾತಾಡಿ ತುಳು ಭಾಷೆಯಲ್ಲಿ ಮಾತನಾಡುವುದನ್ನು ನಾವು ನಮ್ಮ ಹಿರಿಯರಿಂದ ಕಲಿತಿದ್ದೇವೆ. ತುಳು ಭಾಷೆಯನ್ನು ಉಳಿಸುವ ಮಹತ್ವದ ಜವಾಬ್ದಾರಿ ತುಳುನಾಡಿನಲ್ಲಿ ಹುಟ್ಟಿದ ನಮಗೆಲ್ಲರಿಗಿದೆ. ಅದ್ದರಿಂದ ನಾವೆಲ್ಲರೂ ತುಳು ಭಾಷೆಯನ್ನು ಉಳಿಸೋಣ ಹಾಗೂ ಬೆಳೆಸೋಣ ಎಂದರು.
ಶ್ರೀ ಕ್ಷೇತ್ರ ಮಂಗಳಾದೇವಿಯ ಆಡಳಿತ ಮೊಕ್ತಸರಾದ ಪಿ. ರಮಾನಾಥ ಹೆಗ್ಡೆ ಮಾತನಾಡಿ, ಭಜನೆ ದೇವರಿಗೆ ಅತ್ಯಂತ ಪ್ರಿಯವಾದುದು. ಅದರಲ್ಲೂ ಕುಣಿತ ಭಜನೆ ಇಂದು ಹೆಚ್ಚು ಜನ ಪ್ರಿಯತೆ ಪಡೆದಿದೆ. ಸಾಕಷ್ಟು ಮಂದಿ ಯುವ ಸಮುದಾಯ ಇದರಲ್ಲಿ ತೊಡಗಿಸಿ ಕೊಂಡಿದೆ. ಇದು ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ತುಳು ಭಾಷೆಯನ್ನು ಬೆಳೆಸುವಲ್ಲಿ ನೆರವಾಗಿದೆ ಎಂದರು.
ಸ್ಪರ್ಧೆಯ ತೀರ್ಪುಗಾರರಾಗಿ ಭಜನ ಶಿಕ್ಷಕರಾದ ರಮೇಶ್ ಕಲ್ಮಾಡಿ ಮತ್ತು ಕಲಾವಿದ ತೋನ್ಸೆ ಪುಷ್ಕಳ್ ಕುಮಾರ್ ಭಾಗವಹಿಸಿದ್ದರು. ವಿವಿಧ ಭಜನ ತಂಡಗಳು ಕುಣಿತ ಭಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.ತುಳು ಕೂಟದ ಅಧ್ಯಕ್ಷ ದಾಮೋದರ ನಿಸರ್ಗ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ದರು.
ಕಾರ್ಯಕ್ರಮದಲ್ಲಿ ಕ.ಸಾ.ಪ.ಬೆ. ಇದರ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ತುಳು ಕೂಟದ ಉಪಾಧ್ಯಕ್ಷ ವಿ. ಜಿ. ಪಾಲ್, ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ, ಕಾರ್ಯದರ್ಶಿ ಡಾ| ರಾಕೇಶ್ ಕುಮಾರ್, ಶೋಭಾ ಕೇಶವ ಮೊದಲಾದವರು ಉಪಸ್ಥಿತರಿದ್ದರು.