ಬಂಟ್ವಾಳ, ಮಾ. 4 : ಶಂಕಿತ ರೇಬಿಸ್ಗೆ ಯುವಕನೊಬ್ಬ ಬಲಿಯಾಗಿರುವ ಘಟನೆ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆಯಲ್ಲಿ ನಡೆದಿದೆ.
ಮೃತ ಯುವಕನನ್ನು ಅಶೋಕ ಹೆಗ್ಡೆ ಎಂಬವರ ಪುತ್ರ ಪ್ರಶಾಂತ ಹೆಗ್ಡೆ(31)ಎಂದು ಗುರುತಿಸಲಾಗಿದೆ.
ಪ್ರಶಾಂತ್ ಅವರಿಗೆ ಮೂರು ತಿಂಗಳ ಹಿಂದೆ ಅವರ ಮನೆಯ ಸಾಕು ನಾಯಿ ಕಚ್ಚಿದ್ದು,ಅವರು ನಾಯಿ ಕಚ್ಚಿರುವುದಕ್ಕೆ ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲ. ಬಳಿಕ ತೀವ್ರ ಜ್ವರದಿಂದ ಒದ್ದಾಡಿದ್ದು, ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ತೆರಳಿದ್ದಾರೆ.ಜ್ವರ ತಪಾಸಣೆ ನಡೆಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದರು.
ಆದರೆ ಚಿಕಿತ್ಸೆ ಫಲಿಸದೆ ಪ್ರಶಾಂತ್ ಸಾವನಪ್ಪಿದ್ದಾರೆ ಎನ್ನಲಾಗಿದೆ. ಪ್ರಶಾಂತ್ ಅವರ ಕ್ಲಿನಿಕಲ್ ಪರೀಕ್ಷೆ ವರದಿಗಳು ರೇಬಿಸ್ ಲಕ್ಷಣ ಹೊಂದಿದ್ದವು. ಅವರು ಯಾವ ಕಾರಣದಿಂದ ಸಾವನಪ್ಪಿದ್ದಾರೆಂದು ನಿಖರವಾಗಿ ತಿಳಿದು ಬಂದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಅವರು ತಿಳಿಸಿದ್ದಾರೆ.