ನವದೆಹಲಿ, ಜೂ.26: 18ನೇ ಲೋಕಸಭೆಯ ಸ್ಪೀಕರ್ ಆಗಿ ಎನ್ ಡಿಎ ಅಭ್ಯರ್ಥಿ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ. ಓಂ ಬಿರ್ಲಾ ಅವರು ಸತತ 2ನೇ ಬಾರಿ ಸ್ಪೀಕರ್ ಹುದ್ದೆಗೆ ಏರಿದ್ದಾರೆ.
ಇಂಡಿಯಾ ಒಕ್ಕೂಟದಿಂದ ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಪ್ರತಿ ಸ್ಪರ್ಧಿಯಾಗಿದ್ದ ಕೆ. ಸುರೇಶ್ ವಿರುದ್ಧ ಓಂ ಬಿರ್ಲಾ ಗೆಲುವು ಸಾಧಿಸಿದ್ದಾರೆ. ನೂತನ ಸ್ಪೀಕರ್ ಓಂ ಬಿರ್ಲಾ ಅವರನ್ನು ಪ್ರಧಾನ ಮಂತ್ರಿ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿನಂದಿಸಿದರು. ಇಬ್ಬರೂ ಅವರನ್ನು ಸ್ಪೀಕರ್ ಕುರ್ಚಿಗೆ ಕರೆದೊಯ್ದರು.
ಓಂ ಬಿರ್ಲಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ಮಂಡಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಓ ಬಿರ್ಲಾ ಅವರ ಹೆಸರನ್ನು ಅನುಮೋದಿಸಿದ ಬಳಿಕ ಎನ್ ಡಿಎ ಮೈತ್ರಿಕೂಟದ ಹಲವು ಸದಸ್ಯರು ಓಂ ಬಿರ್ಲಾ ಅವರ ಹೆಸರನ್ನು ಅನುಮೋದಿಸಿದರು.ವಿರೋಧ ಪಕ್ಷದ ಸದಸ್ಯರು ಕೋಡಿಕುನ್ನಿಲ್ ಸುರೇಶ್ ಅವರ ಹೆಸರನ್ನು ಪ್ರಸ್ತಾಪಿಸಿ, ಅನುಮೋದಿಸಿದರು.
ಓಂ ಬಿರ್ಲಾ ಸ್ಪೀಕರ್ ಆಗಿ ಆಯ್ಕೆಯಾಗಿರುತ್ತಾರೆ ಎಂದು ಹಂಗಾಮಿ ಸ್ಪೀಕರ್ ಘೋಷಣೆ ಮಾಡಿದ್ದಾರೆ.











