ಮಂಗಳೂರು, ಜು.15 : ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆ ವತಿಯಿಂದ ಮಂಗಳೂರಿನ ಪಂಪ್‌ವೆಲ್ ಸಮೀಪದ ಉಜೋಡಿಯಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ನೂತನ ರೊಬಾಟಿಕ್ ಕಣ್ಣಿನ ಪೊರೆ ಚಿಕಿತ್ಸಾ ವ್ಯವಸ್ಥೆಗೆ ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ್ ಯಸ್ಸೇನಾಯಕ್ ಅವರು ಭಾನುವಾರ ಚಾಲನೆ ನೀಡಿದರು.
ಬಳಿಕ ಮಾತಾಡಿದ ಸಚಿವ ಶ್ರೀಪಾದ್ ಯಸ್ಸೇನಾಯಕ್ ಅವರು ಪ್ರಸಾದ್ ನೇತ್ರಾಲಯದಲ್ಲಿ ರೊಬಾಟಿಕ್ ತಂತ್ರಜ್ಞಾನ ಅಳವಡಿಕೆಯಿಂದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಕರಾವಳಿಯ ಜನರಿಗೆ ಇದರ ಮೂಲಕ ದೃಷ್ಟಿ ದೋಷ ಚಿಕಿತ್ಸೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಮಾತಾಡಿ, ಕರಾವಳಿಯಲ್ಲಿ ಯಾವುದೇ ಹೊಸತನ ಅಳವಡಿಕೆಯಾದರೂ ಸಂತೋಷದ ವಿಚಾರ, ಖಾಸಗಿ ಸಂಸ್ಥೆಗಳು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ವಿಷಯ ನಿಜಕ್ಕೂ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಮಾತಾಡಿ, ಕರಾವಳಿಯ ಜನತೆಗೆ ವಿಶೇಷ ಸೇವೆ ನೀಡುತ್ತಿರುವ ಪ್ರಸಾದ್ ನೇತ್ರಾಲಯದ ಕಾರ್ಯ ಅಭಿನಂದನೀಯ ಎಂದು ಹೇಳಿದರು.
ಪ್ರಸಾದ್ ನೇತ್ರಾಲಯದ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರು ಮಾತನಾಡಿ ಕರಾವಳಿ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ಲೆನ್ಸಾರ್ ರೊಬಾಟಿಕ್ ಲೇಸ್ ಕ್ಯಾಟರಾಕ್ಟ್ ಸರ್ಜರಿ ಸಿಸ್ಟಮ್’ ಪರಿಚಯಿಸಲಾಗುತ್ತಿದೆ. ಈ ಯಂತ್ರವು ಪೊರೆ ಚಿಕಿತ್ಸೆಗೆ ಬೇಕಾದ ಇನ್ನಿಷನ್, ಕಣ್ಣಿನ ಪೊರೆ ಹೊರಗೆ ತೆಗೆಯುವುದು, ಲೆನ್ ಅಳವಡಿಕೆ ಮೊದಲಾದ ಕಾರ್ಯಗಳನ್ನು ತಾನೇ ನಿರ್ವಹಿಸುತ್ತದೆ. ಇದರ ಸಹಾಯದಿಂದ ಮಾಡಿದ ಪೊರೆ ಚಿಕಿತ್ಸೆಯು ಮಾನವ ಕೈಗಳಲ್ಲಿ ಮಾಡುವ ಶಸ್ತ್ರಚಿಕಿತ್ಸೆಗಿಂತ ಅತೀ ನಿಖರವಾಗಿರುತ್ತದೆ. ಅಲ್ಲದೆ ಕಣ್ಣಿನ ಒಳಗಡೆ ಲೆನ್ಸ್ ಅಳವಡಿಕೆ ಹಾಗೂ ನಿಯೋಜನೆ ಅತ್ಯಂತ ನಿಖರವಾಗಿರುತ್ತದೆ. ಶಸ್ತ್ರಚಿಕಿತ್ಸಾ ನಂತರ ಚೇತರಿಕೆಯು ಅತೀ ಶೀಘ್ರ ಆಗುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಸಿಂಡಿಕೇಟ್ ಸದಸ್ಯ ಯು.ಟಿ.ಇಫಿಕಾರ್ ಅಲಿ, ಆಡಳಿತ ನಿರ್ದೇಶಕಿ ರಶ್ಮಿಕೃಷ್ಣ ಪ್ರಸಾದ್, ಮನಪಾ ಸದಸ್ಯ ಸಂದೀಪ್ ಗರೋಡಿ, ಲೆನ್ಸಾರ್ ವಿಷನ್ ಪ್ರೈ.ಲಿ. ಭಾರತ ಮತ್ತು ದಕ್ಷಿಣ ಏಷ್ಯಾ ಸ್ಥಾಪಕ ನಿರ್ದೇಶಕ ಸುಧೀರ್ ಕೌಲ್, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಟ್ರಸ್ಟಿ ರಘುರಾಮ್ ರಾವ್, ವೀಣಾ ರಘುರಾಮ್ ರಾವ್, ನಿರ್ದೇಶಕರಾದ ಡಾ. ವಿಕ್ರಮ್ ಜೈನ್, ಡಾ. ಹರೀಶ್ ಶೆಟ್ಟಿ, ಡಾ. ಜಾಕೋಬ್ ಚಾಕೋ ಮೊದಲಾದವರು ಉಪಸ್ಥಿತರಿದ್ದರು. ಪ್ರೊ. ಬಾಲಕೃಷ್ಣ ಅವರು ಕಾರ್ಯಕ್ರಮ ನಿರೂಪಿಸಿದರು.