ಮಂಗಳೂರು, ಜು. 24 : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಂಸ್ಥೆ ವತಿಯಿಂದ 26ರಿಂದ 28ರ ತನಕ ರಾಷ್ಟ್ರಮಟ್ಟದ ಕಾನೂನು ಹಬ್ಬ ‘ಲೆಕ್ಸ್ ಅಲ್ಟಿ ಮಾ – 2024’ ಆಯೋಜಿಸಲಾಗಿದೆ ಎಂದು ಮಂಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಲೇಜು ಪ್ರಾಂಶುಪಾಲ ಡಾ| ತಾರನಾಥ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 26ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ವಿ.ವಿ.ಯ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಉದ್ಘಾಟಿಸಲಿದ್ದಾರೆ. ಜು. 28ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಇಂಗಲಗುಪ್ಪೆ ಸೀತಾರಾಮಯ್ಯ ಇಂದ್ರೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಾನೂನು ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ದೇವರಾಜ್ ಹಾಗೂ ಪೋಷಕ ರಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ್ ಭಟ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುಮಾರು 43 ಕಾನೂನು ಶಾಲೆಗಳು, ಕಾಲೇಜುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, 9 ರೀತಿಯ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಅಣಕು ನ್ಯಾಯಾಲಯ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ, ಜಾಮೀನು ಅರ್ಜಿ ಸ್ಪರ್ಧೆ, ಕಾನೂನು ರಸ ಪ್ರಶ್ನೆ, ಶಾಸನ ರಚನೆ, ಕಾನೂನು ಸಲಹೆ, ತೀರ್ಪು ಬರೆಯುವ ಸ್ಪರ್ಧೆ, ಕಾನೂನು ಚರ್ಚಾ ಸ್ಪರ್ಧೆ ಮುಂತಾದ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕಾನೂನು ವಿದ್ಯಾರ್ಥಿಗಳ ವಾದ-ಪ್ರತಿವಾದಗಳ ಸಾಮರ್ಥ್ಯ, ಕಾನೂನು ಸಂಶೋಧನೆ ಮುಂತಾದ ಪ್ರತಿಭೆಗಳನ್ನು ಅನಾವರಣ ಮಾಡಲು ಸೂಕ್ತ ವೇದಿಕೆಯಾಗಿದೆ ಎಂದು ಅವರು ತಿಳಿಸಿದರು
ಪತ್ರಿಕಾಗೋಷ್ಠಿಯಲ್ಲಿ ಸಿಬ್ಬಂದಿ ಸಂಚಾಲಕಿ ಡಾ| ಸುಮಾ ಸುರೇಶ್ ಕೊಗಿಲ್ಗೆರಿ, ವಿದ್ಯಾರ್ಥಿ ಕಾರ್ಯದರ್ಶಿ ಸಚಿನ್ ಮಹದೇವ್ ಹೆಗ್ಡೆ ,ವಿದ್ಯಾರ್ಥಿ ಸಂಯೋಜಕಿ ಭಾರ್ಗವಿ ಶಬರಾಯ ಉಪಸ್ಥಿತರಿದ್ದರು.