ಪತ್ರಿಕಾಭವನ, ಜು. 24: ದೇಶದ ಎಲ್ಲಾ ರಾಜ್ಯ ಹಾಗೂ ಭಾಷೆಗಳ ಜನರನ್ನು ಒಂದೇ ವೇದಿಕೆಯಡಿ ಸೇರಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಭಾರತ – ಭಾರತಿ ಸಂಸ್ಥೆಯ ಮಂಗಳೂರು ಶಾಖೆ ಅಸ್ತಿತ್ವಕ್ಕೆ ಬಂದಿದೆ ಎಂದು ಮಂಗಳವಾರ ಪತ್ರಿಕಾಭವನ ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ – ಭಾರತಿ. ಕರ್ನಾಟಕ ಪ್ರಾಂತ ಸಂಯೋಜಕಿ ಅನಿತಾ ಆಚಾರ್ಯ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣೆಯಿಂದ, ಸುಬ್ರಹ್ಮಣ್ಯನ್ ಸ್ವಾಮಿ ಅವರ ಪ್ರೋತ್ಸಾಹದಿಂದ ರಾಷ್ಟ್ರೀಯ ಏಕಾತ್ಮತೆ ಹಾಗೂ ಹಿಂದುತ್ವದ ಪುನರುತ್ಥಾನದ ಸಂಕಲ್ಪದ ಆಧಾರದಲ್ಲಿ ಸಂಸ್ಥೆ ಆರಂಭಗೊಂಡಿದೆ. ದೇಶಾದ್ಯಂತ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಇದೀಗ 60ನೇ ಶಾಖೆಯಾಗಿ ಮಂಗಳೂರು ಶಾಖೆ ಅಸ್ತಿತ್ವಕ್ಕೆ ಬಂದಿದೆ ಎಂದು ಅವರು ಹೇಳಿದರು.
ಸಂಸ್ಥೆಯ ಸ್ಥಾಪನಾ ದಿನ, ರಕ್ಷಾ ಬಂಧನ, ರಾಜ್ಯೋತ್ಸವ, ಗಣರಾಜ್ಯೋತ್ಸವ ಮುಂತಾದ ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಳ್ಳುತ್ತಿದೆ. ರಾಷ್ಟ್ರೀಯ ಹಬ್ಬಗಳನ್ನು ಎಲ್ಲ ರಾಜ್ಯ, ಭಾಷೆಯ ಜನರು ಜತೆಗೂಡಿ ಆಚರಿಸುತ್ತಿದ್ದೇವೆ. ಡಿಸೆಂಬರ್ ಅಥವಾ ಜನವರಿಯಲ್ಲಿ ಮಂಗಳೂರಿನಲ್ಲಿ ನೆಲೆಸಿರುವ ವಿವಿಧ ರಾಜ್ಯಗಳ ಜನರಿಂದ ಆಹಾರ ಉತ್ಸವ ಏರ್ಪಡಿಸುವ ಉದ್ದೇಶವಿದೆ. ಆಯಾ ರಾಜ್ಯಗಳ ಜನರು ತಮ್ಮ ವಿಶೇಷ ತಿನಿಸುಗಳನ್ನು ತಯಾರಿಸಿ ಆಹಾರ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಭಾರತಭಾರತಿ ರಾ ಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ವಿನಯ ಪತ್ರಾಲೆ, ಮಂಗಳೂರು ಘಟಕ ಅಧ್ಯಕ್ಷ ವಸಂತ ಶೆಟ್ಟಿ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ , ಚೇತನ್ ಸೂರೇಜಾ, ರಘುಪತಿ ಆಚಾರ್ಯ ಉಪಸ್ಥಿತರಿದ್ದರು.