ಮಂಗಳೂರು, ಜು.30 : ಮಂಗಳೂರು ಪತ್ರಿಕಾ ಭವನದಲ್ಲಿ ಪ್ರೆಸ್‌ಕ್ಲಬ್ ಗೌರವ ಅತಿಥಿ ಪುರಸ್ಕಾರ ಕಾರ್ಯಕ್ರಮ ಮಂಗಳವಾರ ನಡೆಯಿತು.ಹಿರಿಯ ಪತ್ರಕರ್ತ ಪರಮಾನಂದ ಸಾಲ್ಯಾನ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರೆಸ್‌ಕ್ಲಬ್ ಗೌರವ ಅತಿಥಿ ಪುರಸ್ಕಾರ ಸ್ವೀಕರಿಸಿದ ಭಾರತೀಯ ವಾಯು ಸೇನೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಸುಧೀರ್ ಜಿ.
ಅವರು ಮಾತನಾಡಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದು ಒಂದು ವಿಶಿಷ್ಟ ಅನುಭವ. ಸೇನೆಗೆ ಸೇರ ಬಯಸುವ ಯುವಕರು ದೇಶಪ್ರೇಮ, ಸೇವಾ ಮನೋಭಾವನೆ ಹಾಗೂ ದೃಢವಾದ ಮಾನಸಿಕ ಸಿದ್ಧತೆ ಹೊಂದಿರುವುದು ಅಗತ್ಯ ಎಂದು ಭಾರತೀಯ ವಾಯು ಸೇನೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಸುಧೀರ್ ಜಿ. ಅಮೀನ್ ಹೇಳಿದರು.
ಭಾರತೀಯ ವಾಯು ಸೇನೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸುವ ಅವಕಾಶ ಲಭಿಸಿದ್ದು, ಅದರ ಅನುಭವ ವಿಭಿನ್ನ . ಪದವಿ ಮುಗಿದು ಪರೀಕ್ಷೆ ಫಲಿತಾಂಶ ಬರುವ ಮೊದಲೇ ವಾಯು ಸೇನೆಗೆ ಆಯ್ಕೆಯಾಗಿದ್ದೆ ಎಂದರು.
ವಾಯು ಸೇನೆಯ ತರಬೇತಿಯ ನಂತರ ಗೌಹಾಟಿಯಲ್ಲಿ ವೃತ್ತಿ ಜೀವನ ಆರಂಭಗೊಂಡಿತು. ವಿವಿಧ ಕರ್ತವ್ಯಗಳನ್ನು ನಿರ್ವಹಿಸಿ ಹಂತಹಂತವಾಗಿ ಭಡ್ತಿ ಪಡೆದು ಗ್ರೂಪ್ ಕ್ಯಾಪ್ಟನ್ ಆಗಿ ನಿವೃತ್ತಿಯಾದೆ. ವಿಶ್ವದ ಅತಿ ದೊಡ್ಡ ಹೆಲಿಕಾಪ್ಟರ್‌ನಲ್ಲಿ ಕೆಲಸ ಮಾಡುವ ಅವಕಾಶ ದೊರಕಿತ್ತು. ಈ ಹೆಲಿಕಾಪ್ಟರ್‌ನಲ್ಲಿ ಬುಲ್ಡೋಜರ್ ಕೊಂಡೊಯ್ದು ಈಶಾನ್ಯ ಭಾರತದ ಕೆಲವು ದುರ್ಗಮ ಪ್ರದೇಶಗಳಲ್ಲಿ ರಸ್ತೆ ಮಾಡಲು ಸಾಧ್ಯವಾಯಿತು. ಅಸ್ಸಾಂ, ಅರುಣಾಚಲ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಪ್ರವಾಹ ಬಂದಾಗ ಜನರನ್ನು ರಕ್ಷಣೆ ಮಾಡಿದ್ದೆವು. ಈ ಸಂದರ್ಭ ಸಂತ್ರಸ್ತರಿಂದ ಸಿಗುತ್ತಿದ್ದ ಪ್ರಶಂಸೆ ವೃತ್ತಿ ಜೀವನನದ ಮರೆಯಲಾಗದ ಕ್ಷಣಗಳು ಎಂದು ಅವರು ವಿವರಿಸಿದರು.
ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕಾ ಭವನ ಟ್ರಸ್ಟ್‌ನ ಅಧ್ಯಕ್ಷ ರಾಮಕೃಷ್ಣ ಆರ್. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ ವಂದಿಸಿದರು. ಕೋಶಾಧಿಕಾತಿ ವಿಜಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.