ವಿಟ್ಲ ಆ. 9 : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ವತಿಯಿಂದ ಒಡಿಯೂರು ಶ್ರೀಗಳ ಜನ್ಮದಿನೋತ್ಸವ – ಗ್ರಾಮೋತ್ಸವ ಕಾರ್ಯಕ್ರಮವು ಗುರುವಾರ ಜರಗಿತು.
ಈ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗಳು ಆಶೀರ್ವಚನ ನೀಡಿ, ಆಧ್ಯಾತ್ಮದ ಜತೆ ಲೋಕಹಿತದ ಕಾರ್ಯ ಮಾಡಿದಾಗ ಆನಂದ ಲಭ್ಯವಾಗುತ್ತದೆ. ಗುರುಸೇವೆಯೆಂದರೆ ತತ್ವದ ಆರಾಧನೆ. ಜನ, ಧನ ಶಾಶ್ವತವಲ್ಲ. ಜನಸೇವೆ, ಸಮಾಜಸೇವೆ ಮೂಲಕ ಜೀವನ ಸಾರ್ಥಕಗೊಳಿಸಬೇಕು ಎಂದು ಸ್ವಾಮೀಜಿ ನುಡಿದರು.
ಮಾಣಿಲ ಶ್ರೀಧಾಮ – ಶ್ರೀ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಒಡಿಯೂರು ಶ್ರೀಗಳ ಗ್ರಾಮವಿಕಾಸ ಆದರ್ಶವಾಗಿದೆ. ಸಮಾಜಕ್ಕೆ ಉಪಯುಕ್ತವಾಗಿದೆ. ಯೋಜನೆಯಿಂದ ಅನೇಕ ಬಡ ದೀನ ದಲಿತರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಆಗುತ್ತಿದೆ ಎಂದು ಸ್ವಾಮೀಜಿ ಹೇಳಿದರು.
ಶ್ರೀ ಗುರುದೇವದತ್ತ ಸಂಸ್ಥಾನಮ್ ಇಲ್ಲಿನ ಸಾಧ್ವೀ ಶ್ರೀ ಮಾತಾನಂದಮಯೀ ಅವರು ಆಶೀರ್ವಚನ ನೀಡಿ, ಒಡಿಯೂರು ಶ್ರೀಗಳವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಸಹಕಾರ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಶಾಲೆಗಳನ್ನು ತೆರೆದು ಸಂಸ್ಕಾರ, ಸಂಸ್ಕೃತಿಗಳ ಮೂಲಕ ನೈತಿಕ ಶಿಕ್ಷಣ ನೀಡುತ್ತಿದ್ದಾರೆ. ಉತ್ತಮ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಶ್ರೀ ಮಾತಾನಂದಮಯೀ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗಳು ನಿಡುವಡೆ ಮಹಾಬಲೇಶ್ವರ ಭಟ್ (ಪಾಮರ) ಸಂಕಲನದ ‘ಶ್ರೀಮದ್ಭಗವದ್ಗೀತಾ ತ್ರಿಭಾಷಾ’ ಶಬ್ದಾರ್ಥ ಕೋಶ ಕೃತಿಯನ್ನು ಬಿಡುಗಡೆಗೊಳಿಸಿದರು. ಅರ್ಹ ಫಲಾನುಭವಿಗಳಿಗೆ ಸಹಾಯಹಸ್ತ ವಿತರಿಸಲಾಯಿತು. ಜನ್ಮದಿನೋತ್ಸವ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾರತ ಸರಕಾರದ ಎನ್.ಐ.ಎ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕಡಂದಲೆ ಪರಾರಿ ಪ್ರಕಾಶ್ ಎಲ್. ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಹರೀಶ್ ಶೆಟ್ಟಿ ಐಕಳ, ನಿವೃತ್ತ ಜಮಾ ಉಗ್ರಾಣ ಮುತ್ತದ್ದಿ ಭುಜಬಲಿ ಧರ್ಮಸ್ಥಳ, ಯು.ಎ.ಇ. ಮತ್ತು ಒಮನ್‌ನಲ್ಲಿನ ಆಕ್ಟ್ ಬಿಲ್ಡಿಂಗ್ ಮೆಟೀರಿಯಲ್ಸ್ ಟ್ರೇಡಿಂಗ್ ಕಂಪೆನಿ ಎಂ.ಡಿ. ಹರೀಶ್ ಶೇರಿಗಾರ್, ದುಬ್ಬಾ ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ಗುರುಗಳು ಆಡಳಿತ ನಿರ್ದೇಶಕ ಪ್ರವೀಣ್ ಶೆಟ್ಟಿ ವಕ್ವಾಡಿ, ಮುಂಬಯಿ ಹೈಟೆಕ್ ಎಲೆಕ್ಟಿಫಿಕೇಶನ್ ಎಂಜಿನಿಯರಿಂಗ್ ಆಡಳಿತ ನಿರ್ದೇಶಕ ರವಿನಾಥ್ ಶೆಟ್ಟಿ, ಅಂಕ್ಲೇಶ್ವರ, ಒಡಿಯೂರಿನ ಮಹಾರಾಷ್ಟ್ರ ಸಮಿತಿ ಅಧ್ಯಕ್ಷ ವಾದಯ್ಯ ಬಿ.ಶೆಟ್ಟಿ, ಮುಂಬಯಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ, ಜನ್ಮದಿನೋತ್ಸವ ಸಮಿತಿ ಸ್ವಾಗತ ಸಮಿತಿ ಅಧ್ಯಕ್ಷ ಎ.ಸುರೇಶ್ ರೈ, ಕಾರ್ಯಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಕಾರ್ಯಾಧ್ಯಕ್ಷ ಚನೆಯಡ್ಕ ಲಿಂಗಪ್ಪ ಗೌಡ ಉಪಸ್ಥಿತರಿದ್ದರು.
ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ ಗ್ರಾಮವಿಕಾಸ ಯೋಜನೆಯ ವರದಿ ಮಂಡಿಸಿದರು. ಬೆಳಗ್ಗೆ ಶ್ರೀ ಗಣಪತಿ ಹವನ, ಮಹಾಪೂಜೆ, ರವಿರಾಜ್ ಶೆಟ್ಟಿ ಮತ್ತು ಬಳಗದವರಿಂದ ನಾಮಸಂಕೀರ್ತನೆ, ಶ್ರೀಗಳಿಗೆ ಪಾದಪೂಜೆ, ತುಲಾಭಾರ, ಉಯ್ಯಾಲೆ ಸೇವೆ, ಗುರುವಂದನೆ ನಡೆಯಿತು.