ಉಡುಪಿ, ಆ.23 : ನಗರಸಭೆ ಅಧ್ಯಕ್ಷರಾಗಿ ಬಿಜೆಪಿಯ ಪ್ರಭಾಕರ ಪೂಜಾರಿ ಹಾಗೂ ಉಪಾಧ್ಯಕ್ಷೆಯಾಗಿ ಬಿಜೆಪಿಯ ರಜನಿ ಹೆಬ್ಬಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ಉಡುಪಿ ನಗರಸಭೆಯ ಸತ್ಯಮೂರ್ತಿ ಸಭಾಭವನದಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಮಹೇಶ್ ಚಂದ್ರ ಈ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಈ ಎರಡು ಸ್ಥಾನಗಳಿಗೆ ಕ್ರಮವಾಗಿ ಗುಂಡಿಬೈಲು ವಾರ್ಡ್ ನ ಪ್ರಭಾಕರ ಪೂಜಾರಿ ಹಾಗೂ ಒಳಕಾಡು ವಾರ್ಡ್ ನ ರಜನಿ ಹೆಬ್ಬಾರ್ ನಾಮಪತ್ರ ಸಲ್ಲಿಸಿದ್ದರು. ಯಾವುದೇ ಪ್ರತಿಸ್ಪರ್ಧಿ ಇಲ್ಲದ ಕಾರಣ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಚುನಾವಣಾಧಿಕಾರಿ ಘೋಷಿಸಿದರು.
ಈ ಸಂದರ್ಭದಲ್ಲಿ ಡಾ. ರಾಯಪ್ಪ ಹಾಜರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲು ನಿಗದಿಪಡಿಸಲಾಗಿತ್ತು.