ಕುಂದಾಪುರ, ಆ.26 : ಭಾರೀ ಗಾಳಿ ಮಳೆಗೆ ಮರ ಬಿದ್ದ ಪರಿಣಾಮ ರಸ್ತೆ ಬದಿಯಲ್ಲಿ ಕಟ್ಟಿದ್ದ ದನ ಹಾಗೂ ಅದನ್ನು ಬಿಡಿಸಲು ಹೋಗಿದ್ದ ಮಹಿಳೆ ಮೃತಪಟ್ಟಿದ್ದ ಘಟನೆ ಕುಂದಾಪುರ ತಾಲೂಕಿನ ಕೆಂಚನೂರು ನೀರಿನ ಟ್ಯಾಂಕಿ ಬಳಿ ರವಿವಾರ ನಡೆದಿದೆ.
ಕೆಂಚನೂರು ಗ್ರಾಮದ ಮೈಲಾರಿ ನಿವಾಸಿ ಅಣ್ಣಪ್ಪಯ್ಯ ಆಚಾರಿ ಎಂಬುವರ ಪತ್ನಿ ಸುಜಾತ ಆಚಾರ್ತಿ (53) ಮೃತರು.
ರವಿವಾರ ಸುಜಾತಾ ಆಚಾರ್ತಿ ತಮ್ಮ ಮನೆಯ ಹಾಲು ಕರೆಯುವ ಹಸುವನ್ನು ಮನೆ ಸಮೀಪದ ರಸ್ತೆ ಬದಿಯಲ್ಲಿ ಮೇಯಲೆಂದು ಕಟ್ಟಿದ್ದು, ವಿಪರೀತ ಗಾಳಿ ಮಳೆ ಬೀಸುತ್ತಿರುವ ಹಿನ್ನೆಲೆಯಲ್ಲಿ ಅಂದು ಸಂಜೆ ದನವನ್ನು ಬಿಡಿಸಿ ಕೊಟ್ಟಿಗೆಗೆ ತರಲೆಂದು ಹೋಗಿದ್ದರು. ಈ ವೇಳೆ ಸುಜಾತಾ ಆಚಾರ್ತಿ ಅವರ ಮೇಲೆ ಮರ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದು, ತಕ್ಷಣ ಅವರನ್ನು ಕುಂದಾಪುರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಅಲ್ಲಿ ಸುಜಾತ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.