ಮಂಗಳೂರು, ಸೆ.6 : ಬಂಟರ ಯಾನೆ ನಾಡವರ ಮಾತೃ ಸಂಘ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳು ಹಾಗೂ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ, ಅಷ್ಟೋತ್ತರ ಸಹಸ್ರನಾರಿಕೇಳ ಮಹಾಗಣಯಾಗವು ಸೆ.7ರಿಂದ 9ರ ವರೆಗೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ನ ಓಂಕಾರ ನಗರದಲ್ಲಿ ಜರಗಲಿದೆ ಎಂದು ಗುರುವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಡಾ| ಆಶಾಜ್ಯೋತಿ ರೈ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟಿ ಡಾ| ಆಶಾಜ್ಯೋತಿ ರೈ ಅವರು, ಸೆ.6ರಂದು ಸಂಜೆ 5ಕ್ಕೆ ಶರವು ದೇವಸ್ಥಾನ ಬಳಿಯ ರಾಧಾಕೃಷ್ಣ ದೇವಸ್ಥಾನದಿಂದ ಶ್ರೀ ಸಿದ್ಧಿವಿನಾಯಕ ವಿಗ್ರಹವನ್ನು ಓಂಕಾರ ನಗರಕ್ಕೆ ತರಲಾಗುವುದು. ಸೆ.7ರಂದು ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ, ಗಣೇಶೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ತೆನೆ ವಿತರಣೆ ಕಾರ್ಯಕ್ರಮ, ಸಂಜೆ 5ರಿಂದ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಸೆ.8ರಂದು ಸಂಜೆ 5ರಿಂದ ಧಾರ್ಮಿಕ ಸಭೆ, ಸಮ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸೆ.9ರಂದು ಬೆಳಗ್ಗೆ ಗಂಟೆ 8ರಿಂದ ಅಷ್ಟೋತ್ತರ ಸಹಸ್ರನಾರಿ ಕೇಳಮಹಾಗಣಯಾಗ ನಡೆಯಲಿದೆ. ಮಧ್ಯಾಹ್ನ3.30ಕ್ಕೆಗಣಪತಿ ವಿಜರ್ಸನೆ ಶೋಭಾಯಾತ್ರೆಗೆ ಚಾಲನೆ ದೊರೆಯಲಿದೆ. ಶೋಭಾಯಾತ್ರೆ ಓಂಕಾರ ನಗರದಿಂದ ಬಂಟ್ಸ್ ಹಾಸ್ಟೆಲ್, ಪಿವಿಎಸ್ ವೃತ್ತ, ನ್ಯೂಚಿತ್ರಾ ಟಾಕೀಸ್, ರಥಬೀದಿ, ವೆಂಕಟರಮಣ ದೇವಸ್ಥಾನ ರಸ್ತೆಯಲ್ಲಿ ಸಾಗಿ ಶ್ರೀ ಮಹಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜನೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗಣೇಶೋತ್ಸವ ಸಮಿತಿ ಸಂಚಾಲಕ ದಿವಾಕರ ಸಾಮಾನಿ, ಮಾತೃಸಂಘದ ಮಂಗಳೂರು ತಾಲೂಕು ಸಮಿತಿ ಸಂಚಾಲಕ ವಸಂತ ಶೆಟ್ಟಿ ಗಣೇಶೋತ್ಸವ ಸಮಿತಿ ಸಂಚಾಲಕ ಮನೀಶ್ ರೈ, ಅಶ್ವತ್ಥಾಮ ಹೆಗ್ಡೆ, ಸಂತೋಷ್ ಕುಮಾರ್ ಶೆಡ್ಡೆ ಉಪಸ್ಥಿತರಿದ್ದರು.