ಮಂಗಳೂರು, ಸೆ.30: ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರ 71 ನೇ ಜನ್ಮದಿನಾಚರಣೆಯು ಮಂಗಳೂರಿನ ಸಂಘನಿಕೇತನದಲ್ಲಿ ಭಾನುವಾರ ನಡೆಯಿತು.
ಶ್ರೀ ಮಾತಾ ಅಮೃತಾನಂದಮಯಿ ಮಠ ಮಂಗಳೂರು ಇದರ ಮಠಾಧಿಪತಿ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಶ್ರೀ ಗುರು ಪಾದುಕಾಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು, ಮಗುವಿಗೆ ಅಮ್ಮನ ಗರ್ಭದಲ್ಲಿ ಇರುವಾಗಲೇ ಬೇಕಾದ ಪೋಷಕಾಂಶಗಳು ಆ ತಾಯಿಯಿಂದಲೇ ಲಭಿಸುತ್ತದೆ. ಶರೀರ ಮತ್ತು ಮನಸ್ಸುಗಳ ಸೃಷ್ಟಿ ಅಲ್ಲಿಂದಲೇ ಆಗುತ್ತದೆ. ಅದೇ ರೀತಿಯಲ್ಲಿ ನಾವು ವಿಶ್ವ ಮಾತೆಯ ಆಶ್ರಯದಲ್ಲಿದ್ದೇವೆ. ಮಗು ತಾಯಿಯ ಪ್ರೇಮವನ್ನು ಅನುಭವಿಸುತ್ತದೆ. ಗರ್ಭದಿಂದ ಹೊರಬಂದ ಮೇಲೆ ತಾಯಿ ಮಗುವಿನ ಮುಖಾಮುಖಿ ಆಗುತ್ತದೆ. ಅಮ್ಮನ ಕರುಣೆ, ದಯೆ ನಮಗೆ ಸದಾ ಇರಲಿದೆ ಎಂದರು.
ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ – ಕಿಶೋರ್ ಆಳ್ವ ಮಾತನಾಡಿ, ವಿಶ್ವ ಹೃದಯ ದಿನದ ಸಂದರ್ಭದಲ್ಲಿ ಇಂದು ಅಮ್ಮನ ಜನ್ಮದಿನಾಚರಣೆ ಮಾಡುತ್ತಿರುವುದು ಅರ್ಥ ಪೂರ್ಣ. ಪ್ರೇಮ ಮತ್ತು ಕರುಣೆ ತುಂಬಿದ ಹೃದಯ ಅಮ್ಮನ ವಿಶೇಷತೆಯಾಗಿದ್ದು, ಅಮ್ಮ ಅವರು ವಿಶ್ವದ ಅಸಂಖ್ಯಾತ ಜನರ ಹೃದಯವನ್ನು ಬೆಳಗಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅತಿಥಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಮಾತನಾಡಿ, ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದ್ದರೂ ಭ್ರಷ್ಟತೆ ಸರ್ವವ್ಯಾಪಿಯಾಗಿದೆ. ಹಾಗಾಗಿ ಇಂದು ಸಾಧುಸಂತರ ಮಾರ್ಗದರ್ಶನ ಅತ್ಯಂತ ಅವಶ್ಯವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗಣೇಶ್ ಎರ್ಮಾಳ್ ರವರಿಂದ ಅಮ್ಮನವರ ಜೀವನವನ್ನು ಆಧರಿಸಿದ ಕಥಾಮೃತ ಕಾರ್ಯಕ್ರಮ ನಡೆಯಿತು. ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಆಗಿ ವೃತ್ತಿಪರತೆ ಮೆರೆದ ಮಂಗಳೂರಿನವರಾದ ದಿಶಾ ಅಮೃತ್ ಅವರನ್ನು ಸಮಾನಿಸಲಾಯಿತು. ಅಮೃತ ಆರೋಗ್ಯ ಸೇವಾ ಯೋಜನೆ ಹಾಗೂ ವಸ್ತ್ರದಾನದ ವಿತರಣೆ ನಡೆಯಿತು.
ಮಂಗಳೂರಿನ ಸೇವಾ ಸಮಿತಿಯ ಅಧ್ಯಕ್ಷ ಡಾ| ವಸಂತಕುಮಾರ ಪೆರ್ಲ ಸ್ವಾಗತಿಸಿದರು. ಉಡುಪಿ, ಸೇವಾ ಸಮಿತಿಯ ಅಧ್ಯಕ್ಷ ಯೋಗೀಶ್ ಕೊಡವೂರು ವಂದಿಸಿದರು. ಡಾ| ದೇವದಾಸ್ ಪುತ್ರನ್ ನಿರೂಪಿಸಿದರು. ಅಮ್ಮನವರ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ ಹಾಗೂ ಮುಂಬಯಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.