ಮಂಗಳೂರು, ಅ.10: ರಾಷ್ಟ್ರಮಟ್ಟದ ಮಾನ್ಯತೆ ಪಡೆದುಕೊಳ್ಳುತ್ತಿರುವ ತುಳುನಾಡಿನ ಹುಲಿವೇಷ ಕುಣಿತದ ಕಲಾ ಶ್ರೇಷ್ಠತೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಸದುದ್ದೇಶದಿಂದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಅ. 11ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಮೂರನೇ ವರ್ಷದ ಕುಡ್ಲದ ಪಿಲಿ ಪರ್ಬ’ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ ಶೆಟ್ಟಿ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ ಹಾಗೂ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಆಯೋಜಿರುವ ಕುಡ್ಲದ ಪಿಲಿಪರ್ಬ ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳ ಲಿದೆ ಎಂದರು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 5 ಲಕ್ಷ ರೂ., ದ್ವಿತೀಯ ಬಹುಮಾನ 3 ಲಕ್ಷ ರೂ., ತೃತೀಯ ಬಹುಮಾನ 2 ಲಕ್ಷ ರೂ. ನೀಡಿ ಗೌರವಿಸಲಾಗುವುದು. ಅಲ್ಲದೆ ಶಿಸ್ತಿನ ತಂಡ, ಅತ್ಯುತ್ತಮ ಹುಲಿ ಮೆರವಣಿಗೆ ತಂಡ, ಕಪ್ಪು ಪಿಲಿ, ಪರ್ಬದ ಪಿಲಿ, ಮರಿ ಹುಲಿ, ತಾಸೆ, ಮುಡಿ, ಬಣ್ಣಗಾರಿಕೆ, ಧರಣಿ ಮಂಡಲ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ ನೀಡ ಲಾಗುವುದು. ವೈಯಕ್ತಿಕ ಬಹುಮಾನವಾಗಿ ತಲಾ 25 ಸಾವಿರ ರೂ. ಹಾಗೂ ಪ್ರತಿ ಹುಲಿವೇಷ ತಂಡಕ್ಕೆ 50 ಸಾವಿರ ರೂ. ಗೌರವ ಮೊತ್ತ ನೀಡಲಾಗುವುದು ಎಂದರು.
ಈ ಬಾರಿ ವಿಧಾನ ಪರಿಷ ತ್ ಉಪ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ರಾತ್ರಿ 10 ಗಂಟೆಯೊಳಗೆ ಕಾರ್ಯಕ್ರಮ ಮುಕ್ತಾಯಗೊಳಿಸಬೇಕಾಗಿದೆ. ಹೀಗಾಗಿ ಸೀಮಿತವಾಗಿ ಕರಾವಳಿಯ 10 ಹುಲಿ ವೇಷ ತಂಡಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಪಿಲಿ ಪರ್ಬದಲ್ಲಿ ನಟರಾದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರಿಷಬ್ ಶೆಟ್ಟಿ, ರಾಜ್ ಬಿ.ಶೆಟ್ಟಿ, ಬಿಗ್ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ, ಅರ್ಜುನ್ ಕಾಪಿಕಾಡ್, ಅನೂಪ್ ಸಾಗರ್, ಶನಿಲ್ ಗುರು, ದೇವದಾಸ್ ಕಾಪಿಕಾಡ್, ರಾಕೇಶ್ ಅಡಿಗ, ಭೋಜರಾಜ್ ವಾಮಂಜೂರು, ವಿನೀತ್ ಕುಮಾರ್ ಸಮಿತಾ ಅಮೀನ್, ಸೇರಿದಂತೆ ಆನೇಕ ರು ಪಿಲಿಪರ್ಬಕ್ಕೆ ಆಗಮಿಸುವರು ಎಂದು ಅವರು ಮಾಹಿತಿ ನೀಡಿದರು.
ಪ್ರತಿಷ್ಠಾನದ ಅಧ್ಯಕ್ಷ ದಿವಾಕರ್ ಪಾಂಡೇಶ್ವರ್, ಪದಾಧಿಕಾರಿಗಳಾದ ಅಶ್ವಿತ್ ಕೊಟ್ಟಾರಿ, ಜಗದೀಶ್ ಕದ್ರಿ, ಲಲಿತ್ ಮೆಂಡನ್, ಶಾನ್ ಕೋಡಿಕೆರೆ ಉಪಸ್ಥಿತರಿದ್ದರು.