ಮಂಗಳೂರು,ಅ.14: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವದ ವೈಭವದ ಶೋಭಾಯಾತ್ರೆ ರವಿವಾರ ನಡೆಯಿತು. ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಭವ್ಯ ಶೋಭಾಯಾತ್ರೆಯು ಜರಗಿತು.
ಕುದ್ರೋಳಿ ಕ್ಷೇತ್ರದಲ್ಲಿ ನವರಾತ್ರಿ ಅಂಗವಾಗಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀ ಶಾರದಾ ಮಾತೆ, ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿಗ್ರಹ ಸಹಿತ ವರ್ಣರಂಜಿತ ಮೆರವಣಿಗೆ ನಡೆಯಿತು.
ಶ್ರೀ ಕ್ಷೇತ್ರ ಕುದ್ರೋಳಿಯಿಂದ ಹೊರಟ ದಸರಾ ಶೋಭಾಯಾತ್ರೆ ಮಣ್ಣಗುಡ್ಡ ,ಲಾಲ್ ಬಾಗ್, ನವಭಾರತ್ ಸರ್ಕಲ್, ಕೆ.ಎಸ್. ರಾವ್ ರಸ್ತೆ, ವಿವಿ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್ ಸ್ಟ್ರೀಟ್, ನ್ಯೂ ಚಿತ್ರಾ ಟಾಕೀಸು, ಅಳಕೆ ಮಾರ್ಗ ವಾಗಿ ಕುದ್ರೋಳಿ ಶ್ರೀ ಕ್ಷೇತ್ರ ಕ್ಕೆ ಮರಳಿ. ಸೋಮವಾರ ಮುಂಜಾನೆ, ಪೂಜೆ ಬಲಿ, ಪ್ರಾತಃಕಾಲ ಮಂಟಪ ಪೂಜೆ ಬಳಿಕ ದೇವಳದ ಪುಷ್ಕರಣಿಯಲ್ಲಿ ಶಾರದಾ ವಿಸರ್ಜನೆ ನಡೆಯಿತು.
70ಕ್ಕೂ ಮಿಕ್ಕಿದ ಸ್ತಬ್ಧಚಿತ್ರಗಳ ಜತೆಗೆ ದೇವಿಯರ ವಿಗ್ರಹಗಳು, ವೇಷಭೂಷಣಗಳು, ಹುಲಿವೇಷ, ಅನಾರ್ಕಲಿ, ಸಂಘ ಸಂಸ್ಥೆಗಳ ಸ್ತಬ್ಧಚಿತ್ರಗಳು, ನಾನಾ ರಾಜ್ಯಗಳ ಕಲಾ ತಂಡಗಳು, ಬ್ಯಾಂಡ್ ತಂಡಗಳು ಶೋಭಾಯಾತ್ರೆಯಲ್ಲಿ ಸಾಗಿದವು.ಈ ಬಾರಿಯ ನವರಾತ್ರಿಯ ಶೋಭಾಯಾತ್ರೆ ಭಾನುವಾರ ರಜಾದಿನವಾದ ಕಾರಣದಿಂದ ಶೋಭಾಯಾತ್ರೆ ವೀಕ್ಷಣೆಗೆ ಜನಜಂಗುಳಿ ಹೆಚ್ಚಾಗಿತ್ತು. ಹೊರ ಜಿಲ್ಲೆ, ರಾಜ್ಯ, ವಿದೇಶಿ ಪ್ರವಾಸಿಗರು ಶೋಭಾಯಾತ್ರೆಯ ವೀಕ್ಷಣೆಗೆ ಬಂದಿರುವುದು ವಿಶೇಷವಾಗಿತ್ತು.
ಶೋಭಾಯಾತ್ರೆಯಲ್ಲಿ ಶಾಸಕ ಡಿ.ವೇದವ್ಯಾಸ ಕಾಮತ್, ವಿಧಾನ ಪರಿಷತ್ತು ಸದಸ್ಯ ಪ್ರತಾಪ್‌ಸಿಂಹ ನಾಯಕ್, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಉಪಾಧ್ಯಕ್ಷರಾದ ಊರ್ಮಿಳಾ ರಮೇಶ್, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಆರ್., ಪ್ರಮುಖರಾದ ಮಾಲತಿ ಜೆ.ಪೂಜಾರಿ, ರವಿಶಂಕರ ಮಿಜಾರ್, ಸಂತೋಷ್ ಕುಮಾರ್ ಜೆ., ಎಂ.ಶೇಖರ್ ಪೂಜಾರಿ, ಜಗದೀಪ್ ಡಿ.ಸುವರ್ಣ, ಹರಿಕೃಷ್ಣ ಬಂಟ್ವಾಳ್, ನವೀನ್‌ಚಂದ್ರ ಡಿ.ಸುವರ್ಣ, ಎ.ಸಿ.ಭಂಡಾರಿ, ಎಂ.ಶಶಿಧರ ಹೆಗ್ಡೆ ಸಹಿತ ಹಲವು ಗಣ್ಯರು, ಕ್ಷೇತ್ರಾಡಳಿತದ ಪ್ರಮುಖರು ಉಪಸ್ಥಿತರಿದ್ದರು.