ಕಾಪು, ಅ. 15: ಕರ್ನಾಟಕದ ಕೊಲ್ಲಾಪುರ ಖ್ಯಾತಿಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗ ಮತ್ತು ಭಕ್ತಾಭಿಮಾನಿಗಳ ಸಹಭಾಗಿತ್ವದೊಂದಿಗೆ ಆಯೋಜಿಸಲಾಗಿರುವ ಉಡುಪಿ ಉಚ್ಚಿಲ ದಸರಾ ಉತ್ಸವ 2024ರ ವೈಭವದ ವಿಸರ್ಜನ ಶೋಭಾಯಾತ್ರೆ ಮಂಗಳವಾರ ಸಂಜೆ ನಡೆಯಿತು.
ಉಚ್ಚಿಲ ದಸರಾ ರೂವಾರಿ ಡಾ| ಜಿ. ಶಂಕರ್ ಮತ್ತು ಶಾಲಿನಿ– ಶಂಕರ್ ದಂಪತಿ ಪುಷ್ಪಾರ್ಚನೆಗೈಯ್ಯುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.
ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳಿಗೆ ಕ್ಷೇತ್ರದ ತಂತ್ರಿ ವೇ.ಮೂ. ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಮತ್ತು ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಮಹಾಮಂಗಳಾರತಿ ಮತ್ತು ವಿಸರ್ಜನ ಆರತಿ ಬೆಳಗಿದ ಬಳಿಕ ವಿಗ್ರಹಗಳನ್ನು ಟ್ಯಾಬ್ಲೊಗಳಿಗೆ ಸ್ಥಳಾಂತರಿಸಲಾಯಿತು.
ಶ್ರೀ ಮಹಾಲಕ್ಷ್ಮೀ ದ್ವಾರದ ಬಳಿ ಶ್ರೀ ಕ್ಷೇತ್ರ ಮಾತೆ ಮಹಾಲಕ್ಷ್ಮೀ ದೇವರನ್ನೊಳಗೊಂಡ ಅಂಬಾರಿ ಹೊತ್ತ ವೈಶಿಷ್ಟ್ಯ ಪೂರ್ಣವಾದ ಕರಿಯಾನೆಗೆ ಡ್ರೋನ್ ಮೂಲಕ ಪುಷ್ಪಾರ್ಚ ನೆಗೈದು ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ವಿವಿಧ ಭಜನ ತಂಡಗಳು, ಸಾಮಾಜಿಕ ಜಾಗೃತಿ ಸಾರುವ ಪ್ರತಿಕೃತಿಯುಳ್ಳ ಟ್ಯಾಬ್ಲೊಗಳು, ಆಕರ್ಷಕ ಬೃಹತ್ ಸ್ತಬ್ಧಚಿತ್ರಗಳು ಸಹಿತ ವಿವಿಧ ವೇಷ ಭೂಷಣಗಳು, ಚೆಂಡೆ, ವಾದ್ಯ ಘೋಷಗಳು ಶೋಭಾಯಾತ್ರೆಯ ಮೆರುಗು ಹೆಚ್ಚಿಸಿದವು. ರಾತ್ರಿ ಕಾಪು ಲೈಟ್ ಹೌಸ್ ಬಳಿ ಸಮುದ್ರದಲ್ಲಿ ಮೂರ್ತಿಗಳ ಜನಸ್ತಂಭನ ಸಂಪನ್ನಗೊಂಡಿತು.