ಮಂಗಳೂರು,ಅ.20 : ಕುಟುಂಬ ವೈದ್ಯರ ಸಂಘ ಮಂಗಳೂರು ಇದರ ವಿಂಶತಿ ವರ್ಷದ ಆಚರಣೆಯ ಅಂಗವಾಗಿ ಭಾನುವಾರ ನಗರದ ಐಎಂಎ – ಡಾ.ಎ.ವಿ.ರಾವ್ ಕಾನ್ಫೆರೆನ್ಸ್ ಹಾಲ್‌ನಲ್ಲಿ ಕುಟುಂಬ ವೈದ್ಯರ ರಾಷ್ಟ್ರೀಯ ಸಮ್ಮೇಳನ ನಡೆಯಿತು.
ಕುಟುಂಬ ವೈದ್ಯರ ರಾಜ್ಯ ಸಮ್ಮೇಳನ ವನ್ನು ಕರ್ನಾಟಕ ಮೆಡಿಕಲ್ ಕೌನ್ಸಿಲ್ನ ಅಧ್ಯಕ್ಷ ಡಾ. ಯೋಗಾನಂದ ರೆಡ್ಡಿ ಅವರು ಉದ್ಘಾಟಿಸಿ ದರು.ನಂತರ ಮಾತನಾಡಿದ ಅವರು, ಎಲ್ಲ ವೈದ್ಯರಲ್ಲೂ ಒಬ್ಬ ಕುಟುಂಬ ವೈದ್ಯ ಉಳಿಯಬೇಕು. ಆಗ ಸಮಗ್ರ ವೈದ್ಯಕೀಯ ಸೇವೆ ಸಾಧ್ಯ. ವೈದ್ಯಕೀಯ ಪದ್ಧತಿಯನ್ನು ಸರಕಾರ ಸರಿಯಾಗಿ ಉಪಯೋಗಿಸದ ಕಾರಣ ಗ್ರಾಮೀಣ ಭಾಗದ ಜನರಿಗೆ ವೈದ್ಯಕೀಯ ಚಿಕಿತ್ಸೆ ಸಿಗುವಲ್ಲಿ ವ್ಯತ್ಯಾಸವಾಗುತ್ತಿದೆ. ಕುಟುಂಬ ವೈದ್ಯ ಪದ್ಧತಿಯನ್ನು ಉಳಿಸಿ ಬೆಳೆಸುವುದು ಅಗತ್ಯ ಎಂದು ಕರ್ನಾಟಕ ಮೆಡಿಕಲ್ ಕೌನ್ಸಿಲ್ನ ಅಧ್ಯಕ್ಷ ಡಾ. ಯೋಗಾನಂದ ರೆಡ್ಡಿ ಹೇಳಿದರು.
ನಿಟ್ಟೆ ವಿವಿ ಪ್ರೊ ಚಾನ್ಸಲರ್ ಡಾ.ಶಾಂತಾರಾಮ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಕುಟುಂಬ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಕುಟುಂಬ ವೈದ್ಯರಿಂದ ಗ್ರಾಮೀಣ ಭಾಗದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ದೊರೆಯಲಿ ಎಂದರು.
ಕಾರ್ಯಕ್ರಮದಲ್ಲಿ ಡಾ. ಯೋಗಾನಂದ ರೆಡ್ಡಿ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಪೀಕರ್ ಯುಟಿ ಖಾದರ್, ಕೆಎಂಸಿ ಡೀನ್ ಡಾ. ಉಣ್ಣಿಕೃಷ್ಣನ್, ಆಂಧ್ರಪ್ರದೇಶ ಐಎಂಎಸಿಜಿಪಿ ನಿರ್ದೇಶಕ ಡಾ.ಪಿಎಸ್.ಶರ್ಮ, ಡಾ.ಕರುಣಾಕರ್, ಡಾ.ಶ್ರೀನಿವಾಸ ವೇಲು, ಡಾ.ಪವನ್ ಪಾಟೆಲ್, ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆಯ ಅಧ್ಯಕ್ಷ ಡಾ.ರಂಜನ್, ಡಾ.ಜಿ.ಕೆ.ಭಟ್ ಸಂಕಬಿತ್ತಿಲು, ಡಾ.ಅವೀನ್ ಆಳ್ವ, ಡಾ. ಅಣ್ಣಯ ಕುಲಾಲ್, ಡಾ.ಸವಿತಾ, ಡಾ.ಶೇಖರ್ ಪೂಜಾರಿ, ಡಾ. ಸದಾಶಿವ ಪೊಳ್ಳಾಯ ಶ್ರೀನಿವಾಸ್ ಎಸ್ ಮತ್ತಿತರರು ಉಪಸ್ಥಿತರಿದ್ದರು.