ಮಂಗಳೂರು, ಅ. 22 : ರಾಜ್ಯದಲ್ಲಿ ಸುಮಾರು 3ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕರಾವಳಿ ಮೂಲದ ಮರಾಟಿಗರ ಸಮಗ್ರ ಬಲವರ್ಧನೆ ಮತ್ತು ಪ್ರಗತಿಗಾಗಿ ನ.10ರಂದು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ‘ಗದ್ದಿಗೆ’ ಕರಾವಳಿ ಮರಾಟಿ ಸಮಾವೇಶ 2024 ಆಯೋಜಿಸಲಾಗಿದೆ ಎಂದು ಸೋಮವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಾವೇಶ ಸಮಿತಿ ಅಧ್ಯಕ್ಷ ಜಮ್ಮು ಕಾಶ್ಮೀರ ಸರಕಾರದ ಪ್ರಧಾನ ಕಾರ್ಯದರ್ಶಿ ಎಚ್.ರಾಜೇಶ್ ಪ್ರಸಾದ್ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾವೇಶ ಸಮಿತಿ ಅಧ್ಯಕ್ಷ ಎಚ್.ರಾಜೇಶ್ ಪ್ರಸಾದ್ ಅವರು, 22 ವರ್ಷಗಳ ಬಳಿಕ ಶಿಕ್ಷಣ, ಸಂಘಟನೆ ಹಾಗೂ ಸ್ವಾಭಿಮಾನದ ಧೈಯದೊಂದಿಗೆ ಸಮಾವೇಶ ಆಯೋಜಿಸಲಾಗುತ್ತಿದೆ. ಮೂಲತಃ ಮಹಾರಾಷ್ಟ್ರದಿಂದ ವಲಸೆ ಬಂದು ಕರ್ನಾಟಕದ ಗುಡ್ಡಗಾಡಿನಲ್ಲಿ ವಾಸಿಸುತ್ತಿರುವ ಮರಾಟಿ ಸಮುದಾಯದ ಸುಮಾರು ಶೇ.80ರಷ್ಟು ಮಂದಿ ಇಂದಿಗೂ ಆರ್ಥಿಕವಾಗಿ ಹಿಂದುಳಿದಿದ್ದು, ಅನೇಕ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು. ಸಮಾವೇಶದಲ್ಲಿ ಸುಮಾರು 15ರಿಂದ 20 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ‘ಗದ್ದಿಗೆ’ ಸ್ಮರಣ ಸಂಚಿಕೆಯನ್ನು ಡಾ| ಎಂ. ಮೋಹನ್ ಆಳ್ವ ಬಿಡುಗಡೆ ಮಾಡಲಿದ್ದಾರೆ. ಪದ್ಮಶ್ರೀ ಪುರಸ್ಕೃತ ಮರಾಟ ಮಹಾಲಿಂಗ ಅಮೈಅವರನ್ನು ಸಮ್ಮಾನಿಸಲಾಗುವುದು ಎಂದರು.
ಸಮಾವೇಶದಲ್ಲಿ ಮರಾಟಿಗರ ವಿವಿಧ ಆಚಾರ-ವಿಚಾರ ಸಂಸ್ಕಾರಗಳನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು , ಗೋಷ್ಠಿಗಳು, ಉಪನ್ಯಾಸ ಹಾಗೂ ಸನ್ಮಾನ ಮತ್ತು ಸಾಧಕರನ್ನು ಪುರಸ್ಕರಿಸುವ ಕಾರ್ಯಕ್ರಮಗಳು ನಡೆಯಲಿವೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ| ಎಂ. ಮೋಹನ್ ಆಳ್ವ, ಎಸ್.ಮಂಜುನಾಥ್, ರತಿ ಪ್ರಭಾಕರ ನಾಯ್ಕ, ಹಾಗೂ ಪ್ರವೀಣ್ ಕುಮಾರ್ ಮುಗುಳಿ ಭಾಗವಹಿಸಲಿದ್ದಾರೆ ಎಂದರು.
ಕರ್ನಾಟಕ ಮರಾಟಿ ಸಂಘ ಬೆಂಗಳೂರು ಸಹಕಾರದಲ್ಲಿ ನ.9ರಂದು ಬೆಳಗ್ಗೆ 9 ರಿಂದ ಆಳ್ವಾಸ್ನಲ್ಲಿ ಮರಾಟಿಗರಿಗಾಗಿಯೇ ಉದ್ಯೋಗ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 1,500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿದ್ದಾರೆ. ಸುಮಾರು 30ಕ್ಕೂ ಹೆಚ್ಚು ವಿವಿಧ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪ್ರಮುಖರಾದ ಡಾ ಕೆ.ಸುಂದರ್ ನಾಯಕ್, ಎನ್.ವಿಶ್ವನಾಥ್ ನಾಯ್ಕ, ರಾಮಚಂದ್ರ ಕೆಂಬಾರೆ, ರತ್ನಾವತಿ, ಮಹಾಲಿಂಗ ನಾಯ್ಕ ಗೌತಮ್ ಉಪಸ್ಥಿತರಿದ್ದರು.