ಮಂಗಳೂರು, ನ. 2: ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆ ವತಿಯಿಂದ ಅತ್ತಾವರದ ಐಎಂಎ ಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ, ಪುಸ್ತಕ ಬಿಡುಗಡೆ ಮತ್ತು ಚೊಚ್ಚಲ ಐಎಂಎ ಮಂಗಳೂರು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ ನಡೆಯಿತು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ। ಶಾಂತಾರಾಮ ಶೆಟ್ಟಿ ಅವರು ಕನ್ನಡಧ್ವಜಾರೋಹಣ ಮಾಡಿದರು. ಇದೇ ವೇಳೆ ಅವರು ಬರೆದ ವೈದ್ಯ ವೃತ್ತಿಯ ನೀತಿ ಮತ್ತು ತತ್ವ’, ‘ಎಲುಬು ರೋಗಿಗಳು ಹಾಗೂ ಯೋಗ’, ‘ಮೇಲಾಹಳ್ಳಿ ನನ್ನೂರು ಚೆನ್ನೂರು-ನನ್ನ ಮನೆ-ಪಟೇಲರ ದೊಡ್ಡ ಮನೆ’, ‘ಕ್ಯಾನ್ಸರ್ ಗಾಡ್ಸ್ ಗಿಫ್ಟ್ ಟು ಮಿ ಪುಸ್ತಕಗಳನ್ನು ಡಾ| ಜಿ.ಶಂಕರ್ ಅವರು ಬಿಡುಗಡೆಗೊಳಿಸಿದರು.
ಸಮಾರಂಭ ದಲ್ಲಿ ಮಾತನಾಡಿದ ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ| ಜಿ. ಶಂಕರ್ ಅವರು, ವೈದ್ಯರು ಚಿಕಿತ್ಸೆ ನೀಡುವುದರ ಜತೆಗೆ ಸಾಹಿತ್ಯ ಚಟುವಟಿಕೆ ಮೂಲಕ ಕನ್ನಡವನ್ನು ಬೆಳೆಸುತ್ತಿರುವುದು ಶ್ಲಾಘನಾರ್ಹವಾದ ಕಾರ್ಯವಾಗಿದೆ. ವೈದ್ಯರು ಕನ್ನಡ ಮಾತನಾಡಿದರೆ ಜನರಿಗೂ ಒಂದಷ್ಟು ಧೈರ್ಯ ಹೆಚ್ಚಾಗುತ್ತದೆ. ಇಂತಹ ಕನ್ನಡ ಪರ ಕೆಲಸಗಳು ಇನ್ನಷ್ಟು ನಡೆಯಲಿ ಎಂದರು.
ಬಹುಭಾಷಾ ಚಲನಚಿತ್ರ ನಟ ಸುಮನ್ ತಲ್ವಾರ್ ಅವರು ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಸಮಾರಂಭಕ್ಕೆ ಶುಭಕೋರಿದರು. ಐಎಂಎ ಮಂಗಳೂರು ಅಧ್ಯಕ್ಷ ಡಾ| ಆರ್.ಕೆ. ರಂಜನ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದರು.
ಐಎಂಎ ಮಾಜಿ ಅಧ್ಯಕ್ಷ ಡಾ| ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅವರಿಗೆ ಚೊಚ್ಚಲ ಐಎಂಎ ಮಂಗಳೂರು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ| ಎಂ. ಅಣ್ಣಯ್ಯ ಕುಲಾಲ್ ಅವರು ‘ವೈದ್ಯೋ ನಾರಾಯಣ ಹರಿ ಇದೆಲ್ಲಾ ಎಷ್ಟು ಸರಿ’ ಎಂಬ ವಿಷಯದ ಬಗ್ಗೆ ಕನ್ನಡ ಉಪನ್ಯಾಸ ನೀಡಿದರು. ರಕ್ತ ಸಂಬಂಧಿತ ಕಾಯಿಲೆಗಳ ತಜ್ಞ ವೈದ್ಯ ಕೆಎಂಸಿಯ ಡಾ| ಪ್ರಶಾಂತ್ ಬಿ. ಅವರು ಹಿರಿಯರಲ್ಲಿ ರಕ್ತಹೀನತೆ ಬಗ್ಗೆ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ನಿಟ್ಟೆ ವಿವಿಯ ಐಎಸ್ಆರ್ ಮತ್ತು ಸಿ ಆರ್ ಎಲ್ ಉಪಾಧ್ಯಕ್ಷ ಡಾ| ಸತೀಶ್ ಭಂಡಾರಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್, ಮಾಜಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಐಎಂಎ ಮಂಗಳೂರು ಅಧ್ಯಕ್ಷ ಡಾ| ಆರ್.ಕೆ. ರಂಜನ್, ಹಿರಿಯ ವೈದ್ಯ ಡಾ| ಜಿ.ಕೆ. ಭಟ್, ಚುನಾಯಿತ ಅಧ್ಯಕ್ಷೆ ಜಸ್ಸಿ ಡಿ’ಸೋಜಾ, ಖಜಾಂಚಿ ಡಾ| ಪ್ರಶಾಂತ್ ಮತ್ತಿತರರು ಉಪಸ್ಟಿತರಿದ್ದರು. ಐಎಂಎ ಮಂಗಳೂರು ಘಟಕದ ಕಾರ್ಯದರ್ಶಿ ಡಾ| ಅವಿನ್ ಆಳ್ವ ಸ್ವಾಗತಿಸಿದರು.