ಮಂಗಳೂರು, ನ. 22 : ಇಟಲಿಯ ಮೀರ್ ಗ್ರೂಪ್ ತನ್ನ ವ್ಯವಹಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ ಲಿಮಿಟೆಡ್ (ಎಂಎಸ್ಇಝೆಡ್)ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ನಗರದ ಓಶಿಯನ್ ಪರ್ಲ್ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಸಮಕ್ಷಮದಲ್ಲಿ ಇಟಲಿಯ ಮೀರ್ ಗ್ರೂಪ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್ಚ್ ರಫೆಲ್ ಮರ್ರಾರೆ ಮತ್ತು ಮಂಗಳೂರು ವಿಶೇಷ ಆರ್ಥಿಕ ವಲಯ ಲಿಮಿಟೆಡ್ (ಎಂಎಸ್ಇಝೆಡ್) ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ಸೂರ್ಯನಾರಾಯಣ ಅವರು ಒಪ್ಪಂದಕ್ಕೆ ಸಹಿ ಮಾಡಿದರು.
ಈ ಸಂದರ್ಭ ಮಾತನಾಡಿದ ಎಂಎಸ್‌ಇಝೆಡ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂರ್ಯನಾರಾಯಣ ವಿ ಅವರು ಇಟಲಿಯ ಮೀರ್ ಸಮೂಹ ಸಂಸ್ಥೆಯು ತನ್ನ ಕಟ್ಟಡ ಸಾಮಗ್ರಿಗಳು ಮತ್ತು ಇತರ ವಿನ್ಯಾಸ ಸಾಮಗ್ರಿಗಳ ಉತ್ಪಾದನೆಯ ಘಟಕವನ್ನು ಮಂಗಳೂರಿನಲ್ಲಿ ಆರಂಭಿಸಲು ಆಸಕ್ತಿ ವಹಿಸಿದೆ. ಘಟಕ ಸ್ಥಾಪನೆಯ ಉದ್ದೇಶಕ್ಕಾಗಿ 10 ಎಕ್ರೆ ಜಮೀನು ದೊರಕಿಸಿಕೊಡುವಂತೆ ಮನವಿ ಮಾಡಿದೆ ಎಂದು ಹೇಳಿದರು.
ಮೀರ್ ಗ್ರೂಪ್ ಸಿಇಒ ರಫೇಲೆ ಅವರು ಮಾತನಾಡಿ, ಮಂಗಳೂರು ನಮಗೊಂದು ಮುಖ್ಯವಾದ ಸ್ಥಳವಾಗಿದ್ದು, ಇಲ್ಲಿ ನಮ್ಮ ಉತ್ಪಾದನಾ ಘಟಕ ಸ್ಥಾಪಿಸಲಿದ್ದೇವೆ, ಈ ಮೂಲಕ ಮಧ್ಯಪ್ರಾಚ್ಯ, ಆಫ್ರಿಕನ್ ರಾಷ್ಟ್ರಗಳಿಗೆ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ರಫ್ತು ಮಾಡುವುದು ಸುಲಭವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ,ಚುನಾವಣೆ ಸಂದರ್ಭದಲ್ಲಿ ನೀಡಿದ ಮಾತಿನಂತೆ ಸ್ಥಳೀಯರಿಗೆ ಉದ್ಯೋಗ ಅವಕಾಶಗಳು ದೊರೆಯಬೇಕು ಅಲ್ಲದೆ , ಊರಿನ ಯುವಕರು ಉದ್ಯೋಗಕ್ಕಾಗಿ ಬೇರೆ ಕಡೆ ಹೋಗದೆ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲೇ ಉದ್ಯಮಗಳನ್ನು ಸ್ಥಾಪಿಸಿ, ಸ್ಥಳೀಯರನ್ನು ಪ್ರೇರೇಪಿಸುವ ಉದ್ದೇಶದಿಂದ, ಬಂಡವಾಳವನ್ನು ಜಿಲ್ಲೆಗೆ ತಂದು ಅಭಿವೃದ್ಧಿಯ ಬಗ್ಗೆ ಉತ್ಸುಕರಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮೀರ್ ಗ್ರೂಪ್ನ ನಿರ್ದೇಶಕ(ಕಾನೂನು) ಕ್ಲಾಡಿಯೊ ಮಾಂಟೆಲಿಯೋನ್, ಸುಸ್ಥಿರತೆ ವಿಭಾಗದ ಮುಖ್ಯಸ್ಥ ಸಾಯಿಚಂದು ಪರ್ವತ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.