ಮಂಗಳೂರು, ನ. 25 : ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದಿಂದ ನಿರ್ಮಾಣಗೊಂಡಿರುವ ದಿ | ಲೋಕನಾಥ್ ಬೋಳಾರ್ ಸ್ಮಾರಕ ನೂತನ ಕಟ್ಟಡ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಂಗಳೂರು ಬಂದರಿನಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ| ಜಿ. ಶಂಕರ್ ಅವರು ಮಾತಾನಾಡಿ ಮೀನುಗಾರ ಸಮುದಾಯದವರು ರಾಜಕೀಯ ರಹಿತವಾಗಿ ಒಂದಾಗಬೇಕು. ನಮ್ಮಲ್ಲಿ ಒಗ್ಗಟ್ಟಿದ್ದರೆ ಮಾತ್ರ ನಮಗೆ ಬೇಕಾದ ಸಲವತ್ತು ಗಳನ್ನು ಸರಕಾರದಿಂದ ಪಡೆಯಲು ಸಾಧ್ಯ ಎಂದು ಹೇಳಿದರು.
ಬೋಳೂರು ಅಮೃತಾನಂದಮಯಿ ಶಾಖಾ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಮಾತನಾಡಿ, ಮೀನುಗಾರ ಸಮುದಾಯದವರ ಸಂಘದ ಸಮಾಜಮುಖಿ ಕಾರ್ಯ ಶ್ಲಾಘನೀಯ, ಇಂತಹ ಸೇವಾ ಕಾರ್ಯ ಗಳು ಸಂಘದಿಂದ ನಿರಂತರ ನಡೆಯಲಿ ಎಂದರು.
ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಏಕರೂಪದ ಮೀನು ಗಾರಿಕೆ ನೀತಿ ಜಾರಿಗೊಳಿಸುವ ಮೂಲಕ ಮೀನುಗಾರಿಕೆಯಲ್ಲಿ ಶಿಸ್ತು ತರಲು ಸಾಧ್ಯ. ಈ ನಿಟ್ಟಿನಲ್ಲಿ ಕೇಂದ್ರ ಮೀನುಗಾರಿಕೆ ಸಚಿವರನ್ನು ಶೀಘ್ರದಲ್ಲೇ ಭೇಟಿ ಮಾಡಲಾಗುವುದು ಎಂದು ಅವರು ಹೇಳಿದರು.
ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ವರದರಾಜ್ ಬಂಗೇರ ಮಾತನಾಡಿ, ಸಂಘಕ್ಕೆ ದಿ| ಲೋಕನಾಥ ಬೋಳಾರ್ ಅವರು ಸಂಘಕ್ಕೆ ನೀಡಿದ ಸೇವಾ ಕಾರ್ಯ ಶ್ಲಾಘನೀಯ. ಸಂಘಕ್ಕೆ ಯಾವುದೇ ಚ್ಯುತಿ ಬಾರದಂತೆ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತೇನೆ ಎಂದರು.
ಯಾಂತ್ರಿಕ ಮೀನುಗಾರರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಕಮಲಾಕ್ಷ ಅಮೀನ್ , ಕಾಶಿನಾಥ್ ಕರ್ಕೇರ, ಸಹಕಾರರತ್ನಪುರಸ್ಕೃತಉಮೇಶ್ ಕರ್ಕೇರ ಅವರನ್ನು ಸಮ್ಮಾನಿಸಲಾಯಿತು. 2023-24ನೇ ಸಾಲಿನಲ್ಲಿ ಎಸೆಸೆಲ್ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮೀನುಗಾರರ ಕುಟುಂಬದ 180 ವಿದ್ಯಾರ್ಥಿಗಳಿಗೆ ಸುಮಾರು 12 ಲಕ್ಷರೂ. ಮೊತ್ತದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಐಪಿಸಿಎಲ್ನ ಟೆರಿಟರಿ ಮ್ಯಾನೇಜರ್ (ರಿಟೇಲ್) ಅಮೋಲ್ ಬೋಸ್ಟ್, ಲೇಡಿಗೋಶನ್ ಆಸ್ಪತ್ರೆಯ ನಿವೃತ್ತ ಆರ್ ಎಂಒ ದೇವಿ ಲೋಕನಾಥ್ ಬೋಳಾರ್, ಮಾತಾ ಅಮೃತಾನಂದಮಯಿ ಮಠದ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಅಮೀನ್, ಸಂಘದ ನಿರ್ದೇಶಕರಾದ ವಾಣಿ ಜಿ. ಸಾಲ್ಯಾನ್, ದಯಾನಂದ ಪುತ್ರನ್, ಮೋಹನ್ ಬೆಂಗ್ರೆ, ವಿಲಿಯಂ ಡಿ’ಸೋಜಾ, ಸರಿತಾ ಪುತ್ರನ್, ಮಹೇಶ್ ಉಳ್ಳಾಲ, ಕಿರಣ್ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.