ಉಳ್ಳಾಲ, ನ. 27: ಕೋಟೆಕಾರು ಮಾಡೂರಿನ ಮೆಡ್ ಪ್ಲಸ್ ಮೆಡಿಕಲ್ ಎದುರುಗಡೆಯ ಕಟ್ಟಡದಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿ. ಪುತ್ತೂರು ಇದರ 16ನೇ ಮಾಡೂರು ಶಾಖೆ ಉದ್ಘಾಟನೆಗೊಂಡಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರು ಆಧುನಿಕ ಕಾಲದಲ್ಲಿ ಬಳಕೆಯಲ್ಲಿರುವ ಪ್ಲಾಸ್ಟಿಕ್, ಸ್ಟೀಲ್ ಪ್ಲೇಟಿನ ಪಾತ್ರೆಗಳ ಸಂಸ್ಕೃತಿಯ ನಡುವೆಯು ಮಣ್ಣಿನ ಮಡಕೆಯನ್ನು ತಯಾರಿಸಿ ಜನರಿಗೆ ಒದಗಿಸುವಂತಹ ದೊಡ್ಡ ಮಟ್ಟಿನ ಕಾರ್ಯ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ವತಿಯಿಂದ ಸಮಾಜದಲ್ಲಿ ಆಗುತ್ತಿದೆ. ಸಂಘದ ಮಣ್ಣಿನ ಪಾತ್ರೆಗಳ ನಿರ್ಮಾಣದ ಘಟಕಕ್ಕೆ ಸೋಲಾರ್ ಪೂರೈಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಹೇಳಿದರು.
ಮುಡಿಪು ಕುಲಾಲ ಸಮಾಜ ಸಂಘದ ಅಧ್ಯಕ್ಷ ಪುಂಡರೀಕಾಕ್ಷ ಯು. ಅವರು ನೂತನ ಶಾಖೆಗೆ ಚಾಲನೆ ನೀಡಿ ಶಾಖೆಯ ಪ್ರಥಮ ಠೇವಣಿ ಪತ್ರವನ್ನು ಪಡೆದು ಮಾತನಾಡಿ ಕುಂಬಾರಿಕೆ ವೃತ್ತಿಯಲ್ಲಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಆರಂಭಗೊಂಡ ಈ ಸಹಕಾರ ಸಂಘ ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದರು.
ಮರೋಳಿ ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಇದರ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಅವರು ಮಾತನಾಡಿ ಕುಂಬಾರರ ಕೈಗಾರಿಕೆ ವೃತ್ತಿಯನ್ನು ಸಮಾಜಕ್ಕೆ ಪರಿಚಯ ಮಾಡುವ ಉದ್ದೇಶದಿಂದ ಹಿರಿಯರು ಆರಂಭಿಸಿದ ಸಂಸ್ಥೆ 66ನೇ ವರ್ಷದ ಸಂಭ್ರಮದಲ್ಲಿದೆ. ಆರ್ಥಿಕ ಸಂಸ್ಥೆ ನಡೆಸುವುದು ಸುಲಭದ ವಿಚಾರವಲ್ಲ, ಎಲ್ಲರನ್ನೂ ಒಗ್ಗೂಡಿಸಿ ಸಂಸ್ಥೆಯನ್ನು ಅಧ್ಯಕ್ಷರಾಗಿರುವ ಭಾಸ್ಕರ್ ಪೆರುವಾಯಿ ನಡೆಸುತ್ತಾ ಬಂದಿದ್ದಾರೆ ಎಂದು ಅವರು ಹೇಳಿದರು.
ಸಂಘದ ಅಧ್ಯಕ್ಷ ವಕೀಲ ಭಾಸ್ಕರ್, ಎಂ. ಪೆರುವಾಯಿ ಅಧ್ಯಕ್ಷತೆ ವಹಿಸಿದ್ದರು. ಗಣಕಯಂತ್ರವನ್ನು ಹಿರಿಯ ವಕೀಲ ಲಕ್ಷಣ್ ಕುಂದರ್, ಭದ್ರತಾ ಕೊಠಡಿಯನ್ನು ಕೋಟೆಕಾರು ಪ. ಪಂ.ಅಧ್ಯಕ್ಷ ದಿವ್ಯಾ ಸತೀಶ್ ಶೆಟ್ಟಿ ಉದ್ಘಾಟಿಸಿದರು.ದಿನದರ್ಶಿಕೆಯನ್ನು ಶಿಕ್ಷಕಿ ರಂಜಿನಿ ಮಾಡೂರು, ಠೇವಣಿ ಪತ್ರವನ್ನು ಕುಲಾಲ ಸಂಘ ಕೊಲ್ಯ ಅಧ್ಯಕ್ಷ ಭಾಸ್ಕರ್ ಕುತ್ತಾರ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯ ಸುಜಿತ್ ಮಾಡೂರು, ದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕೊಲ್ಯ ನ ಕುಲಾಲ ಸಂಘದ ಮಾಜಿ ಅಧ್ಯಕ್ಷ ಸೀತಾರಾಮ ಬಂಗೇರ, ಬಿಎಸ್ ಎನ್ಎಲ್ ನ ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಐತಪ್ಪ ಮೂಲ್ಯ ಮತ್ತಿತ್ತರರು ಉಪಸ್ಥಿತರಿದ್ದರು.