ಧರ್ಮಸ್ಥಳ, ಡಿ.03 : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷ ದೀಪೋತ್ಸವದ ಅಂಗವಾಗಿ 92ನೇ ಸಾಹಿತ್ಯ ಸಮ್ಮೇಳನ ಡಿ.30, ಶನಿವಾರ ನಡೆಯಿತು.
ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನವನ್ನು ಶತಾವಧಾನಿ ಆರ್. ಗಣೇಶ್ ಅವರು ಉದ್ಘಾಟಿಸಿದರು. ನಂತರ ಮಾತನಾಡಿ, ಯಾವುದೇ ಭಾಷೆಗೆ ವಿಚಾರಗಳನ್ನು ಭಾವನೆಗಳನ್ನು ಮತ್ತು ವ್ಯವಹಾರವನ್ನು ಸ್ಪಷ್ಟವಾಗಿ ಅಭಿವ್ಯಕ್ತಿಗೊಳಿಸುವ ಶಕ್ತಿ, ಸಾಮರ್ಥ್ಯ ಮತ್ತು ಪ್ರಭುತ್ವ ಇರಬೇಕು. ಈ ದಿಸೆಯಲ್ಲಿ ಪ್ರಾದೇಶಿಕ ವೈವಿಧ್ಯತೆಯ ಸೊಗಡು ಇದ್ದರೂ ಕನ್ನಡ ಸಮೃದ್ಧ ಭಾಷೆಯಾಗಿದೆ. ಪದಸಂಪತ್ತಿಗೆ ಕೊರತೆ ಇಲ್ಲ. ಯಾವುದೇ ಏರಿಳಿತ, ಅಡೆ-ತಡೆ ಎದುರಿಸುವ ಸಾಮರ್ಥ್ಯ ಕನ್ನಡಕ್ಕಿದೆ ಎಂದು ಅವರು ಹೇಳಿದರು.
ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಮ್ಮ ಕನ್ನಡ ಭಾಷೆ ಮತ್ತು ಸಾಹಿತ್ಯ ಕನ್ನಡಿಗರ ಶ್ರೀಮಂತ ಸಂಸ್ಕೃತಿಯ ಸಂಕೇತವಾಗಿದೆ. ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಧರ್ಮದ ನಡುವೆ ಅವಿನಾಭಾವ ಸಂಬಂಧ ಇದ್ದು, ಸಾಹಿತ್ಯ ಸಮಾಜದ ಪ್ರತಿಬಿಂಬವಾಗಿದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಡಾ. ಪ್ರಮೀಳಾ ಮಾಧವ್, ಡಾ. ಬಿ.ವಿ. ವಸಂತ ಕುಮಾರ್, ಪ್ರೊ. ಮೊರಬದ ಮಲ್ಲಿಕಾರ್ಜುನ ಉಪನ್ಯಾಸ ನೀಡಿದರು. ಅಶೋಕ್ ಕುಮಾರ್ ಧನ್ಯವಾದ ಅರ್ಪಿಸಿದರು. ದಿವಾ ಕೊಕ್ಕಡ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು.