ಬೆಂಗಳೂರು,ಡಿ.22 : ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಂಡಿರುವ ಹೃದಯಸ್ಪರ್ಶಿ ಧಾರಾವಾಹಿಯವರ ಮತ್ತೊಂದು ಹೊಸ ದೈನಿಕ ಧಾರಾವಾಹಿ ನೂರು ಜನ್ಮಕೂ ಇದೇ 23 ರಿಂದ ಪ್ರತಿ ರಾತ್ರಿ 8. 30 ಕ್ಕೆ ಪ್ರಸಾರಗೊಳ್ಳಲಿದೆ. ಹೊಸ ಧಾರಾವಾಹಿಯು ವಿಭಿನ್ನ ಕಥೆಯನ್ನು ಒಳಗೊಂಡಿದೆ.
ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಹಾಗೂ ಮೈತ್ರಿ ಎಂಬ ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮದ ಕಥೆ ಇದು. ಚಿರಂಜೀವಿ ಅತಿಮಾನುಷ ಶಕ್ತಿಗಳ ಹಿಡಿತಕ್ಕೆ ಸಿಕ್ಕು ನಲುಗುವಾಗ ರಾಘವೇಂದ್ರ ಸ್ವಾಮಿಯ ಪರಮಭಕ್ತೆ ಮೈತ್ರಿ ತನ್ನ ಶ್ರದ್ಧೆ ಹಾಗೂ ನಂಬಿಕೆಗಳ ಮುಖಾಂತರ ಅವನನ್ನು ರಕ್ಷಿಸಲು ಪಣತೊಡುತ್ತಾಳೆ. ಚಿರಂಜೀವಿಯ ಜೀವ ಕಾಪಾಡುತ್ತಲೇ ತಮ್ಮ ಪ್ರೀತಿಯನ್ನೂ ಉಳಿಸಿಕೊಳ್ಳಲು ಒದ್ದಾಡುವುದನ್ನು ತೋರಿಸಲಾಗಿದೆ.
‘ನೂರು ಜನ್ಮಕೂ ಧಾರಾವಾಹಿಯನ್ನುಚಿಕ್ಕಮಗಳೂರಿನ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಾನವೀಯ ಅಂತಃಕರಣ ಹಾಗೂ ಅತಿಮಾನುಷ ಶಕ್ತಿಗಳ ಅಟ್ಟಹಾಸವನ್ನು ಬಿಂಬಿಸುವ ಧಾರಾವಾಹಿ. ಉನ್ನತ ಮಟ್ಟದ ಗ್ರಾಫಿಕ್ಸ್ ಬಳಸಲಾಗಿದೆ ಎಂದು ನಿರ್ದೇಶಕರ ಮಾತು.
ಶ್ರವಂತ್ ರಾಧಿಕಾ ನಿರ್ದೇಶನದ ಈ ಧಾರಾವಾಹಿಯಲ್ಲಿ ಹೆಸರಾಂತ ನಟನಟಿಯರ ದಂಡೇ ಇದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಗೀತಾ’ ಧಾರಾವಾಹಿಯಲ್ಲಿ ನಾಯಕ ವಿಜಯ್ ಆಗಿ ನಟಿಸಿದ್ದ ಧನುಷ್ ಗೌಡ ಇದೀಗ ‘ನೂರು ಜನ್ಮಕೂ’ ಧಾರಾವಾಹಿಯಲ್ಲಿ ಚಿರಂಜೀವಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಧಾರಾವಾಹಿಯಲ್ಲಿ ಚಿರಂಜೀವಿ, ಜಾಲಿ ಆಗಿರೋ ಮನುಷ್ಯ. ಜೀವನದಲ್ಲಿ ಏನೇ ಕಷ್ಟ ಬಂದರೂ ಸ್ಪೋರ್ಟಿವ್ ಆಗಿ ತಗೋತಾನೆ. ಫ್ಯಾಮಿಲಿ ಮ್ಯಾನ್, ಶತ್ರುಗಳನ್ನೂ ಪ್ರೀತಿಸ್ತಾನೆ. ದೆವ್ವ-ದೇವರ ಮೇಲೆ ನಂಬಿಕೆ ಇಲ್ಲ.ಮಿಸ್ ಮಂಗಳೂರು ಶಿಲ್ಪಾ ಕಾಮತ್ ನಾಯಕಿ ಆಗಿ ಮೈತ್ರಿ ಪಾತ್ರದಲ್ಲಿ ರಂಜಿಸಲಿದ್ದಾರೆ. ಕಥಾ ನಾಯಕಿ ಮೈತ್ರಿ, ರಾಘವೇಂದ್ರ ಸ್ವಾಮಿ ಭಕ್ತೆ. ಆಶಾವಾದಿ, ಸ್ವಾಭಿಮಾನಿ.ದೆವ್ವದ ಪಾತ್ರದಲ್ಲಿ ಚಂದನ ಗೌಡ ನಟಿಸುತ್ತಿದ್ದಾರೆ. ಈ ಪಾತ್ರದ ಹೆಸರು ಕಾಮಿನಿ. ಇವಳಿಗೆ ಚಿರು ಎಂದರೆ ಪ್ರಾಣ. ಶಾರ್ಟ್ ಟೆಂಪರ್, ಹಠ ಮಾರಿ ಹಾಗೂ ಧೈರ್ಯವಂತೆ.
ಹಿರಿಯ ನಟಿ ಗಿರಿಜಾ ಲೋಕೇಶ್, ಭಾಗ್ಯಶ್ರೀ, ಬಿ ಎಂ ವೆಂಕಟೇಶ್ ಮತ್ತು ಗಾಯಕಿ ಅರ್ಚನಾ ಉಡುಪ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ಮಜಾ ಟಾಕೀಸ್ ರೆಮೋ ಕೂಡ ಬಣ್ಣ ಹಚ್ಚಿದ್ದಾರೆ. ಚಿತ್ರಾ ಶೆಣೈ ತಮ್ಮ ಗುಡ್ ಕಂಪನಿ ಸಂಸ್ಥೆಯಿಂದ ನೂರು ಜನ್ಮಕೂ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ.