ಮಂಗಳೂರು, ಡಿ.25 : ಕರಾವಳಿಯಾದ್ಯಂತ ಕ್ರೈಸ್ತರು ಕ್ರಿಸ್ಮಸ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಸಂಭ್ರಮಿಸಿದರು.ಮಧ್ಯರಾತ್ರಿ ವೇಳೆಯಲ್ಲಿ ಕ್ರಿಸ್ತ ಜನಿಸಿದ ನೆನಪು ಸ್ಮರಿಸಿ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತರು ಬಲಿಪೂಜೆಯಲ್ಲಿ ಭಾಗವಹಿಸಿದ್ದರು.
ದ.ಕ. ಜಿಲ್ಲೆಯ ಮಂಗಳೂರು ಧರ್ಮಪ್ರಾಂತಕ್ಕೆ ಒಳಗೊಂಡ ವಿವಿಧ ಚರ್ಚ್ಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಕ್ರೈಸ್ತರ ಮನೆಗಳಲ್ಲಿ, ವಿವಿಧ ಚರ್ಚ್ಗಳ ಆವರಣದಲ್ಲಿ ಗೋದಲಿ ನಿರ್ಮಿಸಲಾಗಿತ್ತು. ರಾತ್ರಿ ವೇಳೆ ಚರ್ಚ್ಗಳಲ್ಲಿ ಕ್ಯಾರೊಲ್ ಗಾಯನದ ಮೂಲಕ ಕ್ರಿಸ್ತ ಜನನ ಸ್ಮರಿಸಿ ಬಲಿಪೂಜೆ, ಪ್ರಾರ್ಥನೆ ನಡೆದವು.
ಮಂಗಳೂರು ಧರ್ಮಪ್ರಾಂತದ ಬಿಷಪ್ ರೈ| ರೆ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ರೊಸಾರಿಯೊ ಕೆಥೆಡ್ರಲ್ನಲ್ಲಿ ಕ್ರಿಸ್ಮಸ್ ಹಬ್ಬದ ಬಲಿಪೂಜೆ ಅರ್ಪಿಸಿ ಕ್ರಿಸ್ತ ಜನನದ ಮಹತ್ವ ಹಾಗೂ ಕ್ರಿಸ್ಮಸ್ ಸಂದೇಶ ನೀಡಿದರು.
ರೊಸಾರಿಯೋ ಕೆಥೆಡ್ರಲ್, ಮಿಲಾಗ್ರಿಸ್, ಬಿಜೈ, ಉರ್ವ, ಬೆಂದೂರ್ ವೆಲ್, ಕುಲಶೇಖರ, ಶಕ್ತಿನಗರ, ಬಿಕರ್ನಕಟ್ಟೆ, ಕೂಳೂರು, ಅಶೋಕನಗರ, ವಾಮಂಜೂರು, ಬೋಂದೆಲ್ , ಬಂಟ್ವಾಳ, ಮುಡಿಪು, ಪೆರ್ಮಾನ್ನೂರು ಸೇರಿದಂತೆ ಎಲ್ಲ ಚರ್ಚ್ಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿದರು.