ಕದ್ರಿ, ಸೆ. 15: ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ 86ನೇ ಸಂಸ್ಥಾಪನ ದಿನ ,ಹಾಲ್ನಲ್ಲಿ ಹೊಸದಾಗಿ ಅಳವಾಡಿಸಲಾಗಿ ಹವಾನಿಯಂತ್ರಣ ಸೌಲಭ್ಯದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕದ್ರಿ ರಸ್ತೆಯ ಸುಜೀರ್ ಸಿ.ವಿ. ನಾಯಕ್ ಕನ್ವೆನ್ಶ ನ್ ಹಾಲ್ನಲ್ಲಿ ಶನಿವಾರ ನಡೆಯಿತು.
ಮಾತೃ ಭಾಷೆಯಾದ ಕೊಂಕಣಿ ಭಾಷೆಯನ್ನು ಉಳಿಸುವ ಕೆಲಸ ಪ್ರತಿ ಕೊಂಕಣಿಗರೂ ಮಾಡಬೇಕು. ಭಾಷೆ ಉಳಿದರೆ ಮಾತ್ರ ನಮ್ಮ ಆಹಾರ ಪದ್ಧತಿ, ಆಚಾರ, ವಿಚಾರ, ಸಂಸ್ಕೃತಿ ಉಳಿಯಲು ಸಾಧ್ಯ ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿ.ಎ. ನಂದಗೋಪಾಲ್ ಶೆಣೈ ಹೇಳಿದರು.
ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಮಹಾಪ್ರಬಂಧಕ ಬಿ. ಸುಧಾಕರ್ ಕೊಟ್ಟಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಇದೇ ವೇಳೆ ಸಭಾಂಗಣದಲ್ಲಿ ಹೊಸದಾಗಿ ಅಳವಡಿಸಲಾಗಿರುವ ಹವಾನಿಯಂತ್ರಣ ಸೌಲಭ್ಯದ ಉದ್ಘಾಟನೆಯನ್ನು ಅತಿಥಿಗಳು ನೆರವೇರಿಸಿದರು. ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಡಾ| ಕಸ್ತೂರಿ ಮೋಹನ್ ಪೈ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಎಸೆಸೆಲ್ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರಶಸ್ತಿ ವಿತರಿಸಲಾಯಿತು.ಕೊಂಕಣಿ ಕಥೆ ಹೇಳುವುದು, ಹಾಡು, ಕೊಂಕಣಿ ಕಥೆ ಅನುವಾದ, ಕೊಂಕಣಿ ಪದಗಳ ಬರವಣಿಗೆ, ಕೊಂಕಣಿ ಭಾಷಣ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಸೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಣೇಲ್ ಅಣ್ಣಪ್ಪನಾಯಕ, ಸಂಘದ ಪ್ರಮುಖರಾದ ಗೋವಿಂದರಾಯ ಪ್ರಭು, ಡಾ| ಎ. ರಮೇಶ್ ಪೈ, ಜಿ. ಮಾಧವರಾಯ ಪ್ರಭು, ಜಿ. ವಿಶ್ವನಾಥ ಭಟ್, ಜಿ. ಎಂ.ಎಸ್. ಪ್ರಭು, ಚಂದ್ರಿಕಾ ಮಲ್ಯ, ಉಷಾ ಮೋಹನ್ ಪೈ, ವಿನಾಯಕ್ ಕಾಮತ್, ಎಂ.ಆರ್.ಕಾಮತ್, ವೆಂಕಟೇಶ್ ಎನ್.ಬಾಳಿಗ ಉಪಸ್ಥಿತರಿದ್ದರು.