ಮೂಡುಬಿದಿರೆ, ಆ. 19 : ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘದ ‘ರೈತ ಸಿರಿ’ ನೂತನ ಕಟ್ಟಡವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಉದ್ಘಾಟಿಸಿದರು. ಹವಾನಿಯಂತ್ರಿತ ಬ್ಯಾಂಕಿಂಗ್ ಕಚೇರಿಯನ್ನು ಶಾಸಕರಾದ ಉಮಾನಾಥ ಎ.ಕೋಟ್ಯಾನ್, ‘ವಜ್ರಸಿರಿ’ ಸಭಾಭವನವನ್ನು ಸಂಸದರಾದ ಕ್ಯಾ| ಬ್ರಿಜೇಶ್ ಚೌಟ, ಹಾಗೂ ಗೋದಾಮು ಮಾರಾಟ ಮಳಿಗೆಯನ್ನು ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್ ಉದ್ಘಾಟಿಸಿದರು.
ನಂತರ ಮಾತನಾಡಿದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು, ಅವಿಭಜಿತ ದ.ಕ. ಜಿಲ್ಲೆಯ ರೈತರು, ಕೃಷಿಕರು ಪಡೆದ ಸಾಲವನ್ನುಪ್ರಾಮಾಣಿಕವಾಗಿ ಮರುಪಾವತಿ ಮಾಡುವ ಮೂಲಕ ಸಹಕಾರಿ ಕ್ಶೇತ್ರವನ್ನು ಬಲಗೊಳಿಸುತ್ತಿದ್ದಾರೆ. ಮಹಿಳೆಯರು ಸ್ವಸಹಾಯ ಗುಂಪುಗಳ ಮೂಲಕ ತಮ್ಮ ಕುಟುಂಬದ ಆರ್ಥಿಕ ಸಶಕ್ತತೆಗೆ ವಿಶೇಷ ಕೊಡುಗೆ ನೀಡುತ್ತಲಿದ್ದಾರೆ. ಸಹಕಾರಿ ಸಂಘಗಳು ತಮ್ಮ ಆರ್ಥಿಕ ಶಕ್ತಿಯನ್ನು ವರ್ಧಿಸಿಕೊಳ್ಳುತ್ತಿದ್ದು ಇದಕ್ಕೆ ಕೇಂದ್ರ ಸರಕಾರವೂ ವಿಶೇಷ ಪ್ರೋತ್ಸಾಹ ನೀಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್ ಸಿಡಿಸಿಸಿ ನಿರ್ದೇಶಕ ಭಾಸ್ಕರ ಎಸ್. ಕೋಟ್ಯಾನ್ ಮಾತನಾಡಿ, ಹೊಸದಾಗಿ ನಿರ್ಮಿಸಿದ 16 ಮಳಿಗೆಗಳನ್ನು ಕೃಷಿ ಉತ್ಪನ್ನ ಅಡಮಾನ ಸೌಕರ್ಯಕ್ಕಾಗಿ ಬಳಸುವ ಯೋಜನೆ ಇದೆ. ರಾ. ಹೆದ್ದಾರಿ ವಿಸ್ತರಣೆಯಿಂದಾಗಿ ಸ್ಠಗಿತಗೊಂಡಿರುವ ಬುಧವಾರದ ಮಾರುಕಟ್ಟೆ ವ್ಯವಹಾರಕ್ಕೆ ಸಂಘದ ಆವರಣದಲ್ಲೇ ಅವಕಾಶ ನೀಡುವ ಯೋಚನೆ ಇದೆ ಎಂದರು.
ಸಂಘದ ವತಿಯಿಂದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸಮ್ಮಾನಿಸಲಾಯಿತು. ಸಿಬಂದಿ ವತಿಯಿಂದ ಸಂಘದ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್ ಅವರನ್ನು ಸಮ್ಮಾನಿಸಲಾಯಿತು. ಎಂಜಿನಿಯರ್ ಹರೀಶ್, ಗುತ್ತಿಗೆದಾರ ಸಂದೀಪ್ ಶೆಟ್ಟಿ ಅವರನ್ನು ಗೌರವಿಸಲಾಯಿತು.ಸಂಘದ ವತಿಯಿಂದ ಮೂಡು ಮಾರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಸ.ಸಂ. ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ., ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ| ಬೆಳಪು ದೇವಿಪ್ರಸಾದ್ ಐಕಳ, ಮಂಗಳೂರಿನ ಆತ್ಮಶಕ್ತಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಚಿತ್ತರಂಜನ್ ಬೋಳಾರ, ಬೆಳುವಾಯಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಪೂಜಾರಿ, ಲಯನ್ಸ್ ಕ್ಲಬ್ ಅಧ್ಯಕ್ಷ ಸೈಮನ್ ಮಸ್ಕರೇನ್ಹಸ್, ಉದ್ಯಮಿ – ಅಬ್ದುಲ್ ಸಲೀಂ ಭಾಗವಹಿಸಿದ್ದರು.
ನೂತನ ಕಟ್ಟಡ ನಿರ್ಮಿಸಿ ಸಂಘದ ಚಟುವಟಿಕೆಗಳನ್ನು ವಿಸ್ತರಿಸಲು ಅವಕಾಶ ಕಲ್ಪಿಸಿರುವುದಕ್ಕೆ ತಮ್ಮಮೆಚ್ಚುಗೆ ಸೂಚಿಸಿದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಎಸ್ ಸಿಡಿಸಿಸಿ ಬ್ಯಾಂಕಿನ ಕೊಡುಗೆಯಾಗಿ 10 ಲಕ್ಷರೂ. ಸಹಾಯಧನವಿತ್ತರು.
ಕಾರ್ಯಕ್ರಮದಲ್ಲಿ ಅಡಳಿತ ಮಂಡಳಿ ನಿರ್ದೇಶಕರು, 5 ಶಾಖೆಗಳ ಪ್ರಬಂಧಕರು, ಸಿಬಂದಿ ವರ್ಗ, ಸದಸ್ಯರು ಪಾಲ್ಗೊಂಡಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಪ್ರಸ್ತಾವನೆಗೈದರು.ಸಂಘದ ನಿರ್ದೇಶಕ ಅಭಿನಂದನ್ ಬಲ್ಲಾಳ್ ಸ್ವಾಗತಿಸಿದರು, ಲೆಕ್ಕಾಧಿಕಾರಿ ಪ್ರತಿಮಾ ವಂದಿಸಿದರು. ಬೆಳುವಾಯಿ ಭಾಸ್ಕರ ಆಚಾರ್ಯ ನಿರೂಪಿಸಿದರು.