ಮಂಗಳೂರು,ಸೆ.13: ಹಿಮಾನಿ ಫಿಲಂಸ್ ಬ್ಯಾನರ್ ನಡಿಯಲ್ಲಿ ಸುಮನ್ ಸುವರ್ಣ ನಿರ್ದೇಶನದಲ್ಲಿ ಶರತ್ ಕುಮಾರ್ ಎ.ಕೆ. ನಿರ್ಮಾಣದಲ್ಲಿ ತಯಾರಾದ “ಕಲ್ಜಿಗ” ಸಿನಿಮಾ ಶುಕ್ರವಾರ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿತು.
ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ನಂತರ ಮಾತಾಡಿ, ಕಲ್ಜಿಗ ಸಿನಿಮಾ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರವಾಗಿದೆ. ಇಂತಹ ಇನ್ನೂ ಚಿತ್ರಗಳು ನಿರ್ಮಾಣವಾಗಲಿ ಎಂದರು.
ಹಿರಿಯ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು ಕಾರ್ಯಕ್ರಮದಲ್ಲಿ ಕಲ್ಜಿಗ ಸಿನಿಮಾಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಿರ್ಮಾಪಕ ಶರತ್ ಕುಮಾರ್ ಎ.ಕೆ.,ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ತಮ್ಮ ಲಕ್ಷ್ಮಣ, ಪ್ರಕಾಶ್ ಧರ್ಮನಗರ, ಉದ್ಯಮಿ ಗಿರೀಶ್ ಶೆಟ್ಟಿ ಕಟೀಲು, ನಟ ಅರ್ಜುನ್ ಕಾಪಿಕಾಡ್, ನಿರ್ದೇಶಕ ಸುಮನ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಶರತ್ ಕುಮಾರ್ ಎ.ಕೆ. ಕಲ್ಜಿಗ ಚಿತ್ರದ ನಿರ್ಮಾಪಕರಾಗಿದ್ದಾರೆ. ಸುಮನ್ ಸುವರ್ಣ ಅವರು ಕಲ್ಜಿಗದ ಸಿನಿಮಾದ ನಿರ್ದೇಶಕರು, ಕಥೆ ,ಚಿತ್ರಕಥೆ, ಸಂಭಾಷಣೆಯನ್ನು ಬರೆದಿದ್ದಾರೆ. ಸಚಿನ್ ಶೆಟ್ಟಿ ಛಾಯಾಗ್ರಹಣ, ಯಶ್ವಿನ್ ಕೆ. ಶೆಟ್ಟಿಗಾರ್ ಸಂಕಲನ ಈ ಚಿತ್ರಕ್ಕಿದೆ. ಹಂಸಲೇಖ ಈ ಸಿನೆಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ನಟ ಅರ್ಜುನ್ ಕಾಪಿಕಾಡ್ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಸುಶ್ಮಿತಾ ಭಟ್ ನಾಯಕಿಯಾಗಿದ್ದಾರೆ. ನಟರಾದ ಗೋಪಿನಾಥ್ ಭಟ್, ಜ್ಯೋತಿಷ್ ಶೆಟ್ಟಿ, ಮಾನಸಿ ಸುಧೀರ್, ವಿಜಯ್ ಶೋಭರಾಜ್ ಪಾವೂರ್, ಶ್ಲಾಘಾ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸಾದ್ ಕೆ. ಶೆಟ್ಟಿಯವರ ಹಿನ್ನೆಲೆ ಸಂಗೀತ ನೀಡಿದ್ದಾರೆ.
ರಾಜ್ಯಾದ್ಯಂತ ಸುಮಾರು ಐವತ್ತು ಟಾಕೀಸ್ ಗಳಲ್ಲಿ ಕಲ್ಜಿಗ ಸಿನಿಮಾ ತೆರೆಕಾಣಲಿದೆ. ದಕ್ಷಿಣ ಕನ್ನಡ , ಉಡುಪಿ , ಬೆಂಗಳೂರು , ಮೈಸೂರು , ಶಿವಮೊಗ್ಗ , ಚಿಕ್ಕಮಗಳೂರು , ಹಾಸನ , ಮಡಿಕೇರಿ , ಹುಬ್ಬಳ್ಳಿ , ಧಾರವಾಡ , ದಾವಣಗೆ ಮುಂಬೈ ಹಾಗೂ ಗಲ್ಫ್ ದೇಶಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿದೆ.